ಹುಬ್ಬಳ್ಳಿ; ಅವಳಿ ನಗರದಲ್ಲಿ ಕಸ ಸುರಿದರೆ ದಂಡ
ಹುಬ್ಬಳ್ಳಿ, ಫೆಬ್ರವರಿ 10: ಹುಬ್ಬಳ್ಳಿ-ಧಾರವಾಡ ಕರ್ನಾಟಕ ರಾಜ್ಯದ 2ನೇ ಅತಿದೊಡ್ಡ ಮಹಾನಗರ ಪಾಲಿಕೆ. ಹುಬ್ಬಳ್ಳಿ-ಧಾರವಾಡ ಸ್ವಚ್ಛ ನಗರದ ಕನಸಿಗೆ ಮುನ್ನುಡಿ ಬರೆಯಲು ಪಾಲಿಕೆ ಮುಂದಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ ದಂಡ ಹಾಕಲು ಮುಂದಾಗಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸ್ವಚ್ಚತೆಗೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲು ಪಾಲಿಕೆ ಮುಂದಾಗಿದೆ. ಪಾಲಿಕೆ ಜಾರಿಗೊಳಿಸುವ ನಿಯಮ ಉಲ್ಲಂಘಿಸಿದರೇ ಭಾರಿ ದಂಡ ಕಟ್ಟಬೇಕಾಗುತ್ತದೆ ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಮಹಾನಗರ ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೇ ದಂಡ ವಿಧಿಸಲು ಮುಂದಾಗಿದೆ. ನಗರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕುವ ನಿವಾಸಿಗಳಿಗೆ ಎಚ್ಚರಿಕೆ ರವಾನಿಸಿದೆ.

ಈಗಾಗಲೇ ದಂಡ ವಿಧಿಸುವ ಕೆಲಸವನ್ನು ಪಾಲಿಕೆ ಅಧಿಕಾರಿಗಳು ಆರಂಭಿಸಿದ್ದಾರೆ. ನಗರವನ್ನು ಸುಂದರ ಹಾಗೂ ರೋಗ ಮುಕ್ತವಾಗಿಸಲು ಮಹಾನಗರ ಪಾಲಿಕೆ ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುತ್ತಿದೆ.
ಆದರೆ, ಕೆಲವು ಜನರು ಮಾತ್ರ ಎಲ್ಲೆಂದರಲ್ಲಿ ಕಸ ಚೆಲ್ಲುವ ಚಾಳಿಯನ್ನು ಬಿಟ್ಟಿಲ್ಲ. ಅಲ್ಲದೇ ಕಸ ಸಂಗ್ರಹಕ್ಕೆ ಮನೆ ಬಳಿ ಬರುವ ವಾಹನದಲ್ಲಿ ಕಸ ಹಾಕುವ ಬದಲು ರಾತ್ರಿ ಸಮಯದಲ್ಲಿ ರಸ್ತೆಗಳ ಅಕ್ಕಪಕ್ಕದಲ್ಲಿ ಕಸ ಹಾಕುತ್ತಿದ್ದಾರೆ.
ಎಲ್ಲೆಂದರಲ್ಲಿ ಕಸ ಸುರಿದರೆ 5 ರಿಂದ 25 ಸಾವಿರ ರೂ. ತನಕ ದಂಡ ಹಾಕಲಾಗುತ್ತದೆ. ಬೃಹತ್ ತ್ಯಾಜ್ಯಕ್ಕೆ 25 ಸಾವಿರ ರೂ., ಸಾಮಾನ್ಯ ಕಸಗಳನ್ನು ಹಾಕಿದರೆ 5 ಸಾವಿರ ರೂ. ದಂಡ ಮೊತ್ತ ನಿಗದಿ ಮಾಡಲಾಗಿದೆ.
ವಲಯವಾರು ಪರಿಸರ ಅಭಿಯಂತಕರು, ಆರೋಗ್ಯ ನಿರೀಕ್ಷಕರು ಹಾಗೂ ಪೌರ ಕಾರ್ಮಿಕರು ರಾತ್ರಿ ಬಡಾವಣೆಗೆ ತೆರಳಿ ಕಸ ಹಾಕುವವರ ಮೇಲೆ ಕಣ್ಗಾವಲು ಇಡುತ್ತಿದ್ದಾರೆ. ಪೊಲೀಸರು ಸಹ ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ವಾಹನಗಳಲ್ಲಿ ಬಂದು ಕಸ ಹಾಕುವವರು ದಂಡ ಕಟ್ಟದಿದ್ದರೆ ವಾಹನವನ್ನು ವಶಕ್ಕೆ ಪಡೆಯಲಾಗುತ್ತಿದೆ.
ಅವಳಿ ನಗರದ ಸ್ವಚ್ಛತೆಗೆ ಮಹಾನಗರ ಪಾಲಿಕೆ ದಿಟ್ಟ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಲಿದ್ದಾರೆಯೇ? ಕಾದು ನೋಡಬೇಕು.












Click it and Unblock the Notifications