NWKRTC-Jog Falls: ಜೋಗ ಜಲಪಾತ ವೀಕ್ಷಣೆಗೆ ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ, ದಿನಾಂಕ-ದರಪಟ್ಟಿ
ಹುಬ್ಬಳ್ಳಿ, ಜುಲೈ 11: ಮಳೆಗಾಲ ಬಂತೆಂದರೆ ಸಾಕು ಹಸಿರು ಹೊದಿಕೆ, ನೀಲಿ ಆಕಾಶದ ಮಧ್ಯೆ ಹಾಲಿನಂತೆ ಧುಮ್ಮಿಕ್ಕುವ ರುದ್ರರಮಣೀಯ ಜೋಗ ಜಲಪಾತ ನೋಡಲು ಎರಡು ಕಣ್ಣುಗಳು ಸಾಲದು. ಮಳೆ ಆರಂಭವಾಗುತ್ತಿದ್ದಂತೆ ನೀರಿನ ಪ್ರಮಾಣ ಏರಿಕೆ ಆಗುತ್ತದೆ. ಈ ವೇಳೆ ಪ್ರವಾಸಿಗರ ದಂಡು ಜಲಪಾತ ಸುತ್ತಮುತ್ತ ಕಂಡು ಬರುತ್ತದೆ.
ಈ ವರ್ಷವು ವಿಶ್ವ ವಿಖ್ಯಾತ ಜೋಗ ಜಲಪಾತ ನೋಡಲು ಬಯಸಲು ಸಾರ್ವಜನಿಕರಿಗಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಈ ಬಸ್‌ಗಳು ಎಲ್ಲಿಂದ ಪ್ರಯಾಣ ಆರಂಭಿಸುತ್ತವೆ?, ಸಮಯ, ದಿನಾಂಕ ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿದೆ.

ಮಳೆಗಾಲದ ಪ್ರಯುಕ್ತ ವಿಶ್ವವಿಖ್ಯಾತ ಪ್ರವಾಸಿ ತಾಣ ಜೋಗ ಜಲಪಾತದ ವೀಕ್ಷಣೆಗೆ ಮುಂಬರಲಿರುವ ರವಿವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಸುಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ನಿಗಮದ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.
ವಾರಗಳಿಂದಲೂ ಮಲೆನಾಡು, ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಭಾರೀ ಮಳೆ ಆಗುತ್ತಿದೆ. ಎಲ್ಲಾ ನದಿಗಳು, ಜಲಪಾತಗಳು ತುಂಬಿ ಹರಿಯುತ್ತಿವೆ. ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಕೊಂಡಿದೆ. ಮಳೆ ಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಡುವ ಸುತ್ತಲಿನ ಪ್ರಕೃತಿ ಸೌಂದರ್ಯ ಅನನ್ಯ. ''ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ" ಎನ್ನುವಂತೆ ಕಣ್ಮನ ಸೆಳೆಯುವ ಜಲಪಾತದ ದೃಶ್ಯ ವೈಭವ ಸವಿಯಲು ಇದು ಅತ್ಯಂತ ಸೂಕ್ತ ಕಾಲ.
ರಾಜಹಂಸ, ಎಸಿ ಬಸ್ ವ್ಯವಸ್ಥೆ
ಸಾರ್ವಜನಿಕರ ಬೇಡಿಕೆಯ ಮೇರೆಗೆ ಜೋಗ ಜಲಪಾತ ವೀಕ್ಷಿಸಲು ಕುಟುಂಬದವರೊಂದಿಗೆ ಹೋಗಿ ಬರಲು ಅನುಕೂಲವಾಗುವಂತೆ ರವಿವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ರಾಜಹಂಸ ಹಾಗೂ ಮಲ್ಟಿ ಅಕ್ಸೆಲ್ ವೋಲ್ವೋ ಎಸಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಮಾರ್ಗ ಮಧ್ಯದಲ್ಲಿ ಶಿರಸಿ ಮಾರಿಕಾಂಬ ದೇವಸ್ಥಾನದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೋಗದಲ್ಲಿ ಜಲಪಾತ ವೀಕ್ಷಣೆ ಹಾಗೂ ಪ್ರಕೃತಿ ಸೌಂದರ್ಯ ಸೊಬಗು ಆನಂದಿಸಲು ಸಾಕಷ್ಟು ಸಮಯಾವಕಾಶ ಕಲ್ಪಿಸಲಾಗಿದೆ.
ಸಮಯ ಮತ್ತು ಬೆಲೆ ದರ ವಿವರ
ರಾಜಹಂಸ ಬಸ್ ಹುಬ್ಬಳ್ಳಿಯಿಂದ ಬೆಳಿಗ್ಗೆ 7-30ಕ್ಕೆ ಹೊರಡುತ್ತದೆ. 11-45ಕ್ಕೆ ಜೋಗ ಜಲಪಾತ ತಲುತ್ತದೆ. ಜೋಗ ಜಲಪಾತದಿಂದ ಸಂಜೆ 5-00ಕ್ಕೆ ಹೊಡುತ್ತದೆ. ಹುಬ್ಬಳ್ಳಿಗೆ ರಾತ್ರಿ 9-30ಕ್ಕೆ ಆಗಮಿಸುತ್ತದೆ. ಪ್ರಯಾಣ ದರ ರೂ. 430 ನಿಗದಿಪಡಿಸಲಾಗಿದೆ.
ವೋಲ್ವೊ ಎಸಿ ಬಸ್ ಹುಬ್ಬಳ್ಳಿಯಿಂದ ಬೆಳಿಗ್ಗೆ 8ಗಂಟೆಗೆ ಹೊರಡುತ್ತದೆ. 12-00ಕ್ಕೆ ಜೋಗ ಜಲಪಾತ ತಲುತ್ತದೆ. ಜೋಗ ಜಲಪಾತದಿಂದ ಸಂಜೆ 5-00ಕ್ಕೆ ಹೊಡುತ್ತದೆ. ಹುಬ್ಬಳ್ಳಿಗೆ ರಾತ್ರಿ 9-00ಕ್ಕೆ ಆಗಮಿಸಲಿದೆ. ಇದರ ಪ್ರಯಾಣ ದರ ರೂ. 600 ನಿಗದಿಪಡಿಸಲಾಗಿದೆ.
ಮುಂಗಡ ಬುಕ್ಕಿಂಗ್ ಗೂ ಅವಕಾಶ
ಮುಂಗಡ ಬುಕ್ಕಿಂಗ್ ಈ ವಿಶೇಷ ಬಸ್ ಗಳಿಗೆ www.ksrtc.in ಮತ್ತು KSRTC Mobile App ಮೂಲಕ ಆನ್ ಲೈನ್ ನಲ್ಲಿ ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣ ಮತ್ತು ಹೊಸೂರು ಬಸ್ ನಿಲ್ದಾಣದಲ್ಲಿ ಮುಂಗಡ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 7760991682 ಅಥವಾ 7760991674 ರಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗಿಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.












Click it and Unblock the Notifications