NWKRTC: ಜನರ ಬೇಡಿಕೆಗೆ ಸ್ಪಂದಿಸಿದ ಸಾರಿಗೆ ಸಂಸ್ಥೆ: ಬಾಡಿಗೆಗೆ ವಿವಿಧ ಮಾದರಿಯ ಬಸ್‌ಗಳು ಲಭ್ಯ
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಆರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಹಾಗೂ ರಾಜ್ಯ, ಹೊರ ರಾಜ್ಯಗಳ ಪ್ರಮುಖ ನಗರಗಳಿಗೆ ಸೇವೆ ನೀಡುತ್ತಿರುವ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಉತ್ತಮ ಸೇವೆ ನೀಡುತ್ತಿದೆ. ಈ ಬಸ್‌ಗಳಲ್ಲಿ ನಿತ್ಯ 1.80 ಲಕ್ಷ ಜನರು ಪ್ರಯಾಣ ಮಾಡುತ್ತಾರೆ. ಬೇಸಿಗೆ ರಜೆ ಹಿನ್ನೆಲೆ ಸದ್ಯ ಈ ಬಸ್‌ಗಳನ್ನು ನೀವು ಮದುವೆ ಸಮಾರಂಭ, ಶೈಕ್ಷಣಿಕ ಪ್ರವಾಸ ಇನ್ನಿತರ ಖಾಸಗಿ ಕಾರ್ಯಕ್ರಮಗಳಿಗೆ ಬಾಡಿಗೆ ಪಡೆಯುವುದಿದ್ದರೆ ಚಿಂತಿಸಬೇಕಿಲ್ಲ.
ಹೌದು, ಬೇಸಿಗೆ ರಜೆಯ ಪ್ರಯುಕ್ತ ಪೀಕ್ ಸೀಜನ್ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳು, ಸಮಾರಂಭಗಳಿಗೆ ಪ್ರವಾಸಕ್ಕೆ ತೆರಳುವವರ ಅನುಕೂಲಕ್ಕಾಗಿ ವಿವಿಧ ಮಾದರಿಯ ಬಸ್ಸುಗಳನ್ನು ಸಂಸ್ಥೆ ಬಾಡಿಗೆ ನೀಡುತ್ತಿದೆ. ಬಾಡಿಗೆ ಅಡಿಯಲ್ಲಿ ಸಾಂದರ್ಭಿಕ ಒಪ್ಪಂದದ ಮೇರೆಗೆ ಬಸ್‌ಗಳನ್ನು ಪಡೆಯಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದರು.

ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿ 5 ಘಟಕಗಳಿವೆ. ಒಟ್ಟು 503 ಬಸ್ಸುಗಳು ನಿತ್ಯ ಸಂಚಾರ ಸೇವೆ ನೀಡುತ್ತಿವೆ. ರಾಜ್ಯ ಅಂತಾರಾಜ್ಯಗಳ ಪ್ರಮುಖ ನಗರಗಳಿಗೂ ಸೇವೆ ನೀಡುತ್ತವೆ. ಅದೆಲ್ಲ ಸೇರಿ ಸಂಸ್ಥೆಯ ಎಲ್ಲ ಬಸ್‌ಗಳು ನಿತ್ಯ ಒಟ್ಟು ಸುಮಾರು 1.80 ಲಕ್ಷ ಕಿಲೋ ಮೀಟರ್ ಕ್ರಮಿಸುತ್ತವೆ. ಅದರಲ್ಲಿ ಸರಾಸರಿ 1.10 ಲಕ್ಷ ಮಹಿಳೆಯರು ಹಾಗೂ 70 ಸಾವಿರ ಪುರುಷರು ಸೇರಿದಂತೆ ಇದ್ದು, ಅವರಿಬ್ಬರು ಸೇರಿ ದೈನಂದಿನ ಪ್ರಯಾಣಿಕರ ಸಂಖ್ಯೆ 1.80 ಲಕ್ಷ ಮೀರುತ್ತದೆ ಎಂದು ಅವರು ವಿವರಿಸಿದ್ದಾರೆ.
ಯಾವೆಲ್ಲ ಕಾರ್ಯಕ್ರಮಗಳಿಗೆ ಬಾಡಿಗೆ ಪಡೆಯಬಹುದು?
ಪ್ರಸ್ತುತ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಇರುವ ಕಾರಣದಿಂದಾಗಿ ಹಾಗೂ ಪೀಕ್ ಸೀಸನ್ ಇರುವ ಕಾರಣದಿಂದಾಗಿ ಕಾರ್ಯಕ್ರಮಗಳು, ಸಮಾರಂಭಗಳು ಹೆಚ್ಚಾಗಿವೆ. ಜನರ ಸಂಚಾರದಲ್ಲಿ ಏರಿಕೆ ಕಂಡು ಬಂದಿದೆ. ಹೀಗಾಗಿ ಸಂದರ್ಭಕ್ಕೆ, ಆಯಾ ಋತುವಿಗೆ ತಕ್ಕಂತೆ ವಿಶೇಷ ಬಸ್‌ಗಳನ್ನು ಸಂಸ್ಥೆ ಓಡಿಸುತ್ತದೆ.
ಇದೀಗ ಸಾರ್ವಜನಿಕರ ಬೇಡಿಕೆಯ ಮೇರೆಗೆ ಮದುವೆ, ಗೃಹ ಪ್ರವೇಶ, ಶಾಲಾ ಕಾಲೇಜುಗಳ ಶೈಕ್ಷಣಿಕ ಪ್ರವಾಸ, ಸಂಘ ಸಂಸ್ಥೆಗಳ ಪ್ರವಾಸ, ಸಭೆ, ಸಮಾರಂಭಗಳು ಮತ್ತಿತರ ಕಾರ್ಯಕ್ರಮಗಳಿಗೆ ರಾಜ್ಯದೊಳಗೆ ಹಾಗೂ ಅಂತರ ರಾಜ್ಯಗಳಿಗೆ ದಿನದ ಬಾಡಿಗೆ ಆಧಾರದಲ್ಲಿ ಸಾಂದರ್ಭಿಕ ಒಪ್ಪಂದದ ಮೇರೆಗೆ ವಿವಿಧ ಮಾದರಿಯ ಬಸ್ಸುಗಳನ್ನು ನೀಡಲಾಗುತ್ತದೆ. ಸಾರ್ವಜನಿಕರ ತಮ್ಮ ಅವಶ್ಯಕತೆಗೆ ತಕ್ಕಂತೆ ವೇಗದೂತ ಸಾರಿಗೆ, ರಾಜಹಂಸ, ಸ್ಲೀಪರ್, ಮಲ್ಟಿ ಆ್ಯಕ್ಸಲ್ ವೋಲ್ವೊ ಎಸಿ ಸಾರಿಗೆ ಬಸ್ಸುಗಳನ್ನು ಪಡೆಯಬಹುದು. ಸುರಕ್ಷಿತ ಹಾಗೂ ಸುಗಮ ಪ್ರಯಾಣದ ನಿಟ್ಟಿನಲ್ಲಿ ಸುಸಜ್ಜಿತ ವಾಹನಗಳನ್ನು ಹಾಗೂ ಹಿರಿಯ ಅನುಭವಿ ಚಾಲಕರನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿದರು.
ಬಸ್ ಬಾಡಿಗೆಗೆ ಸಂಪರ್ಕಿಸಿ
ಆಸಕ್ತರು ಹೆಚ್ಚಿನ ಮಾಹಿತಿಗೆ ಸಿ.ಬಿ.ಟಿ.ಯಲ್ಲಿರುವ ವಿಭಾಗೀಯ ಕಚೇರಿ, ಅಥವ ಹತ್ತಿರದ ಬಸ್ ಡಿಪೋಗಳಿಗೆ ಭೇಟಿ ನೀಡಬಹುದು ಅಥವ ಡಿಪೋ ಮ್ಯಾನೇಜರ ರನ್ನು ಕೆಳಕಂಡ ದೂರವಾಣಿ ಸಂಖ್ಯೆಗಳಲ್ಲಿ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.
ಹುಬ್ಬಳ್ಳಿ: 7760991674/ 7760991677/ 7760991678
ನವಲಗುಂದ: 9663299001 ಹಾಗೂ ಕಲಘಟಗಿ: 7795839820 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.












Click it and Unblock the Notifications