ನಾಗಪುರ ತಂಡ ನನ್ನ ಚಲನವಲನದ ಬಗ್ಗೆ ತಿಳಿಯುವುದರಲ್ಲಿ ಚುನಾವಣೆ ಮುಗಿದಿರುತ್ತದೆ: ಬಿಜೆಪಿಗೆ ಸೆಡ್ಡು ಹೊಡೆದ ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಏಪ್ರಿಲ್, 23: ರಾಜ್ಯ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಅದರಲ್ಲೂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾದಾಗಿನಿಂದ ಬಿಜೆಪಿಯಲ್ಲಿ ಹಲವು ಬದಲಾವಣೆಗಳು ಆಗುತ್ತಲೇ ಇವೆ. ಅಲ್ಲದೆ ನನ್ನ ಚಲನವಲನಗಳ ಬಗ್ಗೆ ತಿಳಿಯಲು ನಾಗಪುರದಿಂದ ತಂಡವನ್ನು ಕಳುಹಿಸಿದ್ದಾರೆ. ಇದಕ್ಕೆಲ್ಲ ನಾನು ಎದರುವುದಿಲ್ಲ ಎಂದು ಬಿಜೆಪಿ ವಿರುದ್ಧ ಹುಬ್ಬಳ್ಳಿಯಲ್ಲಿ ಶೆಟ್ಟರ್ ಗುಡುಗಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಚಲನವಲನ ಗಮನಿಸಲು ನಾಗಪುರದಿಂದ ತಂಡ ಬಂದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಂದು ವೇಳೆ ಬಂದಿದ್ದರೆ ನನ್ನ ಚಲನವಲನ ಗಮನಿಸುವುದರೊಳಗಾಗಿ ಚುನಾವಣೆಯೇ ಮುಗಿದಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಹೇಳಿದರು.

ರಾಹುಲ್ ಗಾಂಧಿ ಜೊತೆ ಗಂಭೀರ ಚರ್ಚೆ
ಬಿಜೆಪಿಯವರು ಲಿಂಗಾಯತ ಸಮುದಾಯಕ್ಕೆ ಮಾಡುತ್ತಿರುವ ಅವಮಾನದ ಬಗ್ಗೆ ರಾಹುಲ್ ಗಾಂಧಿ ಜೊತೆ ಗಂಭೀರ ಚರ್ಚೆ ಮಾಡಲಾಗಿದೆ. ಅವರು ಕೂಡ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದಿದ್ದೂ, ನಾನು ಮಾಹಿತಿ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ಹೇಳಿದರು.
ನಾಗಪುರದಲ್ಲಿ ಅಷ್ಟೊಂದು ಎಕ್ಸಪರ್ಟ್ ತಂಡಗಳು ಇದ್ದಲ್ಲಿ ಇತ್ತೀಚೆಗೆ ಅಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಏಕೆ ಸೋಲನ್ನು ಅನುಭವಿಸುತ್ತಿತ್ತು? ಎಂದು ಪ್ರಶ್ನಿಸಿದರು. ಚುನಾವಣೆ ಎಂದ ಮೇಲೆ ನಕರಾತ್ಮಕ ಹಾಗೂ ಧನಾತ್ಮಕ ಅಭಿಪ್ರಾಯಗಳು ಬಂದೇ ಬರುತ್ತವೆ ಎಂದರು.
ನನ್ನ ಬಗ್ಗೆಯೂ ಇದೀಗ ನೆಗೆಟೀವ್ ಅಭಿಪ್ರಾಯಗಳು ಬಂದಿವೆ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹ ಹಲವು ನೆಗೇಟಿವ್ ಅಭಿಪ್ರಾಯಗಳನ್ನು ನಾನು ಎದುರಿಸಿದ್ದೇನೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಎಲ್ಲ ಸ್ಥಾನಮಾನ ನೀಡಿದೆ. ಈ ಬಾರಿ ಚುನಾವಣೆಯಲ್ಲಿ ಐವತ್ತು ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡುತ್ತಾರೆ. ಹಾಗೆಯೆ ಹಾನಗಲ್, ಹುಬ್ಬಳ್ಳಿ-ಧಾರವಾಡದಲ್ಲೂ ಪ್ರಚಾರ ಕಾರ್ಯವನ್ನು ಕೈಗೊಳ್ಳಲಿದ್ದಾರೆ. ಅಲ್ಲದೆ ನನಗೂ ಪ್ರಚಾರಕ್ಕಾಗಿ ಕರೆಯುತ್ತಿದ್ದಾರೆ ಎಂದರು.












Click it and Unblock the Notifications