ಡ್ರಗ್ಸ್ ಬಿಡ್ರಿ...ಇಲ್ಲಾ ಊರ ಬಿಡ್ರಿ...ಹುಬ್ಬಳ್ಳಿ-ಧಾರವಾಡ ಪೊಲೀಸ್!
ಹುಬ್ಬಳ್ಳಿ, ಸೆಪ್ಟೆಂಬರ್ 29: ಮಾದಕ ವಸ್ತುಗಳ ಮಾರಾಟ ನಿಯಂತ್ರಣದ ವಿಚಾರದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮೂರು ತಿಂಗಳಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಡ್ರಗ್ ಪೆಡ್ಲರ್‌ಗಳ ವಿರುದ್ಧ 20ಕ್ಕೂ ಹೆಚ್ಚು ಎಫ್‌ಐಆರ್ ದಾಖಲಿಸಿ, 100ಕ್ಕೂ ಅಧಿಕ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.
ಪೊಲೀಸರು ಸರಣಿ ಟ್ವೀಟ್ ಮೂಲಕ ಈ ಕುರಿತು ಮಾಹಿತಿ ಕೊಟ್ಟಿದ್ದಾರೆ. ಹುಬ್ಬಳ್ಳಿ ಧಾರವಾಡದಾಗ ಏನ ಟ್ರೆಂಡ್ ನಡಿಯಾಕತ್ತತ್ರೀ...? ಎಂದು ಅವರು ಪ್ರಶ್ನೆ ಮಾಡಿದ್ದು, ಡ್ರಗ್ಸ್ ಬಿಡ್ರಿ..ಇಲ್ಲಾ ಊರ ಬಿಡ್ರಿ..‼️ ಎಂದು ಉತ್ತರ ನೀಡಿದ್ದಾರೆ. ಅದು ಹೆಂಗ್ರೀ?, ಎಂದರೆ 2 ನಿಮಿಷ ಇಲ್ಲೇ ಓದ್ರೀ ಎಂದು ವಿವರಗಳನ್ನು ಕೊಟ್ಟಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ವತಿಯಿಂದ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಲಾಗಿದೆ. ಒಟ್ಟಾರೆಯಾಗಿ ಡ್ರಗ್ ಪೆಡ್ಲರ್‌ಗಳ ವಿರುದ್ಧ 20ಕ್ಕೂ ಹೆಚ್ಚು ಎಫ್‌ಐಆರ್ ದಾಖಲಿಸಿ, 100ಕ್ಕೂ ಅಧಿಕ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. 1900ಕ್ಕೂ ಅಧಿಕ ಶಂಕಿತ ಡ್ರಗ್ಸ್ ಬಳಕೆದಾರರ ವೈದ್ಯಕೀಯ ಪರೀಕ್ಷೆ ಮಾಡಿದ್ದು, ಅದರಲ್ಲಿ ಪಾಸಿಟಿವ್ ಬಂದ 950ಕ್ಕೂ ಅಧಿಕ ಡ್ರಗ್ಸ್ ಬಳಕೆದಾರರ ಮೇಲೆ 175 ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕಾರ್ಯಾಚರಣೆ ಹೇಗಿತ್ತು?: ಮಾದಕ ವಸ್ತುಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೇಗಿತ್ತು? ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೊದಲಿಗೆ ಅವಳಿ ನಗರದಲ್ಲಿ ಹೊರ ರಾಜ್ಯಗಳಿಂದ ಬಂದು ಮಾದಕವಸ್ತು ಮಾರಾಟ ಮಾಡುತ್ತಿದ್ದ ಪೆಡ್ಲರ್‌ಗಳ ವಿವರ ಕಲೆಹಾಕಿ, ಅವರು ಎಲ್ಲಿಂದ ಡ್ರಗ್ಸ್ ತರುತ್ತಿದ್ದಾರೆ?, ಯಾರಿಗೆ ಮಾರುತ್ತಾರೆ? ಎಂಬುದರ ಬಗ್ಗೆ ಮಾಹಿತಿ ಕಲೆಹಾಕಿದರು.
ಸತತವಾಗಿ ವಿಶೇಷ ಕಾರ್ಯಾಚರಣೆಗಳ ಮೂಲಕ ನಡೆಸಿ ಡ್ರಗ್ಸ್ ಪೆಡ್ಲರ್‌ಗಳ ಮೇಲೆ ದಾಳಿ ನಡೆಸಿ 20ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಸೇರಿದಂತೆ 100ಕ್ಕೂ ಹೆಚ್ಚು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ನಂತರದಲ್ಲಿ ಡ್ರಗ್ಸ್ ಮಾರಾಟ ಮಾಡುವವರ ಮೇಲೆ ಮಾತ್ರ ಕಾನೂನು ಕ್ರಮ ಜರುಗಿಸಲಾಗುತ್ತದೆ, ಸೇವನೆ ಮಾಡುವವರನ್ನು ಏನೂ ಮಾಡುವುದಿಲ್ಲ ಎಂದುಕೊಂಡಿದ್ದ ಮಾದಕವಸ್ತು ಬಳಕೆದಾರರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗಿದೆ.
ಪೆಡ್ಲರ್‌ಗಳಿಂದ ಯಾರು ಡ್ರಗ್ಸ್ ಖರೀದಿ ಮಾಡಿದ್ದರೋ ಅವರ ಪಟ್ಟಿಯನ್ನು ತಯಾರಿಸಿಕೊಂಡು ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೆಳಗ್ಗೆ ಏಕಕಾಲಕ್ಕೆ ಡ್ರಗ್ಸ್ ಬಳಕೆ ಮಾಡುತ್ತಿದ್ದ 399 ಜನರನ್ನು ವಶಕ್ಕೆ ಪಡೆದು ಆಸ್ಪತ್ರೆಗಳಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಯಿತು. 399 ಜನರಲ್ಲಿ 254 ಜನರು ಡ್ರಗ್ಸ್ ಸೇವನೆ ಮಾಡಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಅದರ ಆಧಾರದ ಮೇಲೆ ಅವರ ವಿರುದ್ಧ ಒಟ್ಟು 58 ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಯಿತು. ಅಷ್ಟೇ ಅಲ್ಲದೆ ಮಾದಕ ವಸ್ತು, ಬಳಕೆದಾರರಿಗೆ ಮತ್ತು ಅವರ ಪಾಲಕರಿಗೂ ಸಹ ಕೌನ್ಸಲಿಂಗ್ ಮಾಡಿಸಲಾಯಿತು.
ಒಂದು ವಾರದ ನಂತರ ಅವಳಿ ನಗರದ ಪೊಲೀಸರು 2ನೇ ಹಂತದ ಕಾರ್ಯಾಚರಣೆ ಆರಂಭಿಸಿದರು. 467 ಡ್ರಗ್ಸ್ ಬಳಕೆದಾರರನ್ನು ಏಕಕಾಲಕ್ಕೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿದ್ದು, ಅದರಲ್ಲಿ 251 ಜನ ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದ್ದು. ಅವರ ವಿರುದ್ಧ 45 ಎಫ್‌ಐಆರ್ ದಾಖಲಿಸಲಾಯಿತು. ಮತ್ತೆ ಅವರುಗಳಿಗೆ & ಪಾಲಕರಿಗೆ ಕೌನ್ಸಲಿಂಗ್ ಮಾಡಲಾಯಿತು.
ಎರಡು ವಾರದ ನಂತರ ಪೊಲೀಸರು ಮೂರನೇ ಹಂತದ ಕಾರ್ಯಾಚರಣೆ ಆರಂಭಿಸಿದರು. ಶಾಲಾ ಕಾಲೇಜುಗಳ ಮಕ್ಕಳು ಡ್ರಗ್ಸ್ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ, ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಯಿತು. 350 ಜನ ಬಳಕೆದಾರರನ್ನು ವಶಕ್ಕೆ ಪಡೆದು ಪರೀಕ್ಷಿಸಲಾಗಿ ಅವರುಗಳಲ್ಲಿ 231 ಜನ ಡ್ರಗ್ಸ್ ಸೇವನೆ ಮಾಡಿದ್ದು ದೃಢಪಟ್ಟಿತ್ತು. ಅದರಲ್ಲಿ 79 ಜನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆ ಮಾಡಿದ್ದು ದೃಢವಾಗಿತ್ತು. ಅವರುಗಳ ವಿರುದ್ಧ 38 ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಯಿತು.
ಮುಂದುವರಿದ ಭಾಗವಾಗಿ ಶನಿವಾರ ಅವಳಿ ನಗರ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 515ಕ್ಕೂ ಹೆಚ್ಚು ಡ್ರಗ್ಸ್ ಬಳಕೆದಾರರ ಮೇಲೆ ದಿಢೀರ್ ದಾಳಿ ನಡೆಸಿ ಅವರುಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಪಾಸಿಟೀವ್ ಬಂದ 145 ಬಳಕೆದಾರರ ವಿರುದ್ಧ 34 ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ನಂತರ ಇವರನ್ನು ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪಕ್ಕೆ ಕರೆತಂದು ಡ್ರಗ್ಸ್ ಬಳಕೆದಾರರಿಗೆ ತಜ್ಞರಿಂದ ಕೌನ್ಸೆಲಿಂಗ್, ಅವರ ಪೋಷಕರಿಗೆ ಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿಯ ಬಗ್ಗೆ ಓರಿಯಂಟೇಷನ್ ಕೂಡ ನಡೆಸಲಾಗಿದೆ.












Click it and Unblock the Notifications