ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ತಂಪೆರೆದ ಮಳೆರಾಯ
ಹುಬ್ಬಳ್ಳಿ, ಜುಲೈ 19: ಕಳೆದ ಎರಡು ದಿನಗಳಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ಈ ಮೂಲಕ ಕೊನೆಗೂ ಜುಲೈ ತಿಂಗಳ ಮಧ್ಯ ಭಾಗದಲ್ಲಿ ಜನರಿಗೆ ಮುಂಗಾರಿನ ದರ್ಶನವಾಗುತ್ತಿದೆ. ಧಾರವಾಡ ಜಿಲ್ಲೆಯಾದ್ಯಂತ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದ ರೈತರು ಕೊಂಚ ನಿರಾಳರಾಗಿದ್ದಾರೆ.
ಜಿಟಿ ಜಿಟಿ ಮಳೆಯಿಂದಾಗಿ ಬಿಸಿಲು ಅಪರೂಪವಾಗಿದ್ದು, ವಾತಾವರಣದಲ್ಲಿ ತಂಪು ಹವಾಗುಣ ಬೆಳೆಗಳಿಗೆ ಕೊಂಚ ಅನುಕೂಲವಾಗಲಿದೆ. ಇನ್ನು ಅವಳಿ ನಗರಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಸಣ್ಣ ಮಳೆಯಿಂದ ಬೀದಿ ವ್ಯಾಪಾರಕ್ಕೆ ಅನಾನುಕೂಲವಾಗಿದ್ದರೂ ಮಳೆ ಬರುತ್ತಿರುವ ಸಮಾಧಾನದಲ್ಲಿ ಜನರು ನೆಮ್ಮದಿಯ ನಿಟ್ಟಿಸಿರು ಬಿಡುತ್ತಿದ್ದಾರೆ.

ಮುಂಗಾರು ಆರಂಭವಾಗಿ ಒಂದುವರೆ ತಿಂಗಳು ಕಳೆದರೂ ಮಳೆ ದರ್ಶನವಿಲ್ಲದೆ ಕಂಗಾಲಾಗಿದ್ದ ಜನರು ಮಳೆಯಿಂದ ಕೊಂಚ ನಿರಾಳರಾಗಿದ್ದಾರೆ. ಗಾಳಿ, ಗುಡುಗು, ಸಿಡಿಲಿನ ಆರ್ಭಟವಿಲ್ಲದ ಮಳೆ ನಗರದ ಜನರಿಗೆ ಮುದ ನೀಡಿದ್ದಂತೂ ಸತ್ಯ.

ಮಳೆಯಿಂದಾಗಿ ನಗರದ ವಿವಿಧೆಡೆಗಳಲ್ಲಿ ಸಂಚಾರಕ್ಕೆ ಸ್ವಲ್ಪ ತೊಂದರೆಯಾದರೂ ಮಳೆ ಬಂದ ಖುಷಿಯಲ್ಲಿ ಜನರು ಯಾವುದನ್ನು ಲೆಕ್ಕಿಸುತ್ತಿಲ್ಲ.












Click it and Unblock the Notifications