ಹುಬ್ಬಳ್ಳಿ: ಕೆಳಗಿಳಿಯಲು ಆಗದೆ ಒಂದು ಗಂಟೆ ಆಗಸದಲ್ಲೇ ಸುತ್ತು ಹೊಡೆದ ವಿಮಾನ
ಹುಬ್ಬಳ್ಳಿ, ಆಗಸ್ಟ್ 16: ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವೊಂದು ಹವಾಮಾನ ವೈಪರೀತ್ಯದಿಂದ ಕೆಳಗಿಳಿಯಲು ಸಾಧ್ಯವಾಗದೆ ಒಂದು ಗಂಟೆ ಕಾಲ ಆಗಸದಲ್ಲಿಯೇ 9 ಸುತ್ತು ಹೊಡೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
Recommended Video
ಇತ್ತೀಚಿಗೆ ಕೇರಳದಲ್ಲಿನ ಏರ್ ಇಂಡಿಯಾ ವಿಮಾನ ದುರಂತ ಮಾಸುವ ಮುನ್ನವೇ ಹವಾಮಾನ ವೈಪರೀತ್ಯದಿಂದ ಮತ್ತೊಂದು ಆತಂಕ ಇಂಡಿಗೋ ವಿಮಾನಕ್ಕೆ ಎದುರಾಗಿತ್ತು.
ಹವಾಮಾನ ವೈಪರೀತ್ಯದಿಂದ ವಿಮಾನ ಲ್ಯಾಂಡಿಂಗ್ ಆಗದೆ ಕೇರಳದಲ್ಲಿ ವಿಮಾನ ಪತನ ಸಂಭವಿಸಿತ್ತು. ಇದರ ಬೆನ್ನಲ್ಲೆ ಇಂದು ಹವಾಮಾನ ವೈಪರೀತ್ಯದಿಂದ ಇಂಡಿಗೋ ವಿಮಾನಕ್ಕೆ ಲ್ಯಾಂಡಿಂಗ್‌ಗೆ ಅನುಮತಿ ಇಲ್ಲದೆ, ಒಂದು ಗಂಟೆಯ ಕಾಲ ಆಗಸದಲ್ಲಿ ಸುತ್ತು ಹೊಡೆದಿದೆ.

60 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಇಂಡಿಗೋ ವಿಮಾನವು ಮುಂಜಾನೆ 8.55ಕ್ಕೆ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ವಿಮಾನ ನಿಲ್ದಾಣದ ಅಧಿಕಾರಿಗಳು ಲ್ಯಾಂಡಿಂಗ್ ಗೆ ಅನುಮತಿ ನೀಡದ ಪರಿಣಾಮ ಒಂದು ಗಂಟೆಯ ಕಾಲ ವಿಮಾನ ಆಗಸದಲ್ಲಿ ಸುತ್ತು ಹೊಡೆಯಿತು.
ಒಂದು ಗಂಟೆಯ ನಂತರ ಇಂಡಿಗೋ 6E7162 ಎಟಿಆರ್ ವಿಮಾನ ಲ್ಯಾಂಡಿಗ್ ಆಗುವ ಮೂಲಕ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ವಿಮಾನದಲ್ಲಿ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಕಾರವಾರಕ್ಕೆ ತೆರಳುತ್ತಿದ್ದರು. ವಿಮಾನದ ಲ್ಯಾಂಡಿಂಗ್ ಸಮಸ್ಯೆಯಾದ ಪರಿಣಾಮ ಪ್ರಯಾಣಿಕರು ಕೆಲಕಾಲ ಆತಂಕಕ್ಕೂ ಸಹ ಒಳಗಾಗಿದ್ದರು.












Click it and Unblock the Notifications