ನಾವು ಮೋದಿ ಅವರನ್ನು ದೇವರೆಂದಿಲ್ಲ, ದೇಶಕ್ಕೆ ಮೋದಿ ಆಪತ್ಬಾಂಧವ-ಸಿಎಂ ಬೊಮ್ಮಾಯಿ
ನಾವು ಮೋದಿ ಅವರನ್ನು ದೇವರು ಎಂದಿಲ್ಲ. ಮೋದಿ ಅವರೂ ತಮ್ಮನ್ನು ದೇವರು ಅಂತ ಎಂದುಕೊಂಡಿಲ್ಲ. ನರೇಂದ್ರ ಮೋದಿ ಅವರು ಒಬ್ಬ ಮಹಾನ್ ನಾಯಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ, ಮಾರ್ಚ್ 13: ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುನಾಮಿ ಶುರುವಾಗಿದೆ. ಪ್ರಧಾನಿ ಮೋದಿ ಅವರು ರಾಜ್ಯದ ಹಲವೆಡೆ ಪ್ರಚಾರ ಮಾಡಿದ್ದಾರೆ. ಅವರು ಬಂದು ಹೋಗಿದ್ದರಿಂದ ಪ್ರಧಾನಿ ಮೋದಿ ಮತ್ತು ಬಿಜೆಪಿ ಪರ ಒಲವು ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಹಜವಾಗಿಯೇ ಕಾಮಗಾರಿಗಳ ಕ್ರೆಡಿಟ್ ವಾರ್ ಇದೆ. ಪಕ್ಕದ ಮನೆಯವಳು ಗಂಡು ಹಡೆದರೆ ಇವರು ಪೇಡ ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇವರು ಎನ್ನುವ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾವು ಮೋದಿ ಅವರನ್ನು ದೇವರು ಎಂದಿಲ್ಲ. ಮೋದಿ ಅವರೂ ತಮ್ಮನ್ನು ದೇವರು ಅಂತ ಎಂದುಕೊಂಡಿಲ್ಲ. ನರೇಂದ್ರ ಮೋದಿ ಅವರು ಒಬ್ಬ ಮಹಾನ್ ನಾಯಕ. ಮೋದಿ ಗಡಿಯಲ್ಲಿ ಭದ್ರತೆ ನೀಡಿ ಅತ್ಯಂತ ಕಷ್ಟಕಾಲದಲ್ಲಿ ಭಾರತವನ್ನು ಎತ್ತಿ ಹಿಡಿದಿದ್ದಾರೆ. ಆಂತರಿಕ ಸುರಕ್ಷತೆ ತಂದು ದೇಶ ಸುಭದ್ರಗೊಳಿಸಿದ್ದಾರೆ
ದೇಶಕ್ಕೆ ಮೋದಿ ಆಪತ್ಬಾಂಧವ ಎಂದು ಪ್ರಧಾನಿ ಮೋದಿ ಅವರನ್ನು ಹೊಗಳಿದರು.
ಇನ್ನು ಕರ್ನಾಟಕಕ್ಕೆ ಬಂದ ಮೋದಿ ರೌಡಿಶೀಟರ್ ಫೈಟರ್ ರವಿಗೆ ನಮಸ್ಕಾರ ಮಾಡಿದ ಫೋಟೋ ವೈರಲ್ ವಿಚಾರವಾಗಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಯಾರೇ ಬಂದರೂ ಮೋದಿ ನಮಸ್ಕಾರ ಮಾಡುತ್ತಾರೆ ಎಂದು, ಮೋದಿ ಪ್ರಧಾನಿ ಹುದ್ದೆಗೆ ಕಳಂಕ ತಂದಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಸಿಎಂ ಬೊಮ್ಮಾಯಿ ನಿರಾಕರಿಸಿದರು.

ವಸತಿ ಸಚಿವ ವಿ.ಸೋಮಣ್ಣ ಬಿಜೆಪಿ ನಾಯಕರ ಮೇಲಿನ ಅಸಮಾಧಾನಕ್ಕೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿರುವ ಬಗ್ಗೆ ಮಾತನಾಡಿದ ಸಿಎಂ, ಸೋಮಣ್ಣ ಇಂದು, ಮುಂದೂ ನಮ್ಮ ಜೊತೆಗೆ ಇರುತ್ತಾರೆ. ನಿನ್ನೆ ಹುಬ್ಬಳ್ಳಿಯಲ್ಲಿ ಯಾವುದೇ ರೀತಿಯ ಮಾತುಕತೆ ಮಾಡಿಲ್ಲ. ಸೋಮಣ್ಣ ನಾನು ಹಳೆಯ ಸ್ನೇಹಿತರು. ಅವರ, ನಮ್ಮ ಭೇಟಿ ಕೇವಲ ಔಪಚಾರಿಕ. ಸೋಮಣ್ಣ ನಮ್ಮ ಜೊತೆಗಿದ್ದಾರೆ, ನಮ್ಮ ಜೊತೆಗೇ ಇರುತ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸಿದರು.
ಇನ್ನು ರಾಜ್ಯದಲ್ಲಿ ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಸಿಬ್ಬಂದಿ ಜೊತೆ ನಮ್ಮವರು ಮಾತುಕತೆ ನಡೆಸಿದ್ದಾರೆ. ಇಂಧನ ಸಚಿವರು ಚರ್ಚೆಯಲ್ಲಿದ್ದಾರೆ. ಕೂಡಲೇ ಅದನ್ನು ಬಗೆಹರಿಸುತ್ತಾರೆ. ನಮ್ಮ ಸಚಿವರು ಈಗಾಗಲೇ ಎರಡು ಸುತ್ತಿನ ಮಾತುಕತೆ ಮಾಡಿದ್ದಾರೆ. ಎಲ್ಲ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದರು.












Click it and Unblock the Notifications