ಸೊಲ್ಲಾಪುರ-ಧಾರವಾಡ ಪ್ಯಾಸೆಂಜರ್ ರೈಲು ಓಡಿಸಿದ ಮಹಿಳೆಯರು
ಹುಬ್ಬಳ್ಳಿ, ಮಾರ್ಚ್ 09: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸೋಮವಾರ ನೈಋತ್ಯ ರೈಲ್ವೆ ಮಹಿಳಾ ಸಿಬ್ಬಂದಿಗಳನ್ನು ಗೌರವಿಸಿತು. ಸೊಲ್ಲಾಪುರ-ಧಾರವಾಡ ಪ್ಯಾಸೆಂಜರ್ ರೈಲನ್ನು ಮಹಿಳೆಯರೇ ಓಡಿಸುವ ಮೂಲಕ ಸಂಭ್ರಮಿಸಿದರು.
ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆ ವಿಭಾಗೀಯ ಕಚೇರಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿನೂತನವಾಗಿ ಆಚರಣೆ ಮಾಡಿತು. ಮಹಿಳೆಯರು 07321 ಸೊಲ್ಲಾಪುರ-ಧಾರವಾಡ ಪ್ಯಾಸೆಂಜರ್ ರೈಲನ್ನು ಓಡಿಸಲು ಅವಕಾಶ ನೀಡಿತು.

ಹುಬ್ಬಳ್ಳಿ-ಧಾರವಾಡ ನಡುವೆ ರೈಲನ್ನು ಮಹಿಳೆಯರೇ ಓಡಿಸಿದರು. ಟಿಕೆಟ್ ವಿತರಣೆ, ಟಿಕೆಟ್ ಪರಿಶೀಲನೆ, ಭದ್ರತಾ ಸಿಬ್ಬಂದಿ ಸೇರಿದಂತೆ ರೈಲಿನ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿದ್ದರು. ರೈಲ್ವೆ ಇಂತಹ ವ್ಯವಸ್ಥೆ ಮಾಡುವ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿತು.
ಮಹಿಳಾ ದಿನದ ಅಂಗವಾಗಿ ರಂಗೋಲಿ, ಅಲಂಕಾರಿಕ ಉಡುಪು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ವೇದಿಕೆ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಉದ್ಘಾಟಿಸಿದರು. ಹುಬ್ಬಳ್ಳಿ ಮಾತ್ರವಲ್ಲ ಸೋಮವಾರ ಭಾರತೀಯ ರೈಲ್ವೆ ದೇಶದ ವಿವಿಧ ನಿಲ್ದಾಣಗಳಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿತ್ತು.

ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ರೈಲನ್ನು ಓಡಿಸುವ ಮೂಲಕ ಅವಕಾಶ ಕೊಟ್ಟರೇ ನಾವು ಈ ಕೆಲಸ ಮಾಡಲಿದ್ದೇವೆ ಎಂದು ತೋರಿಸಿದರು.












Click it and Unblock the Notifications