ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹೊಸ ಟರ್ಮಿನಲ್ ಕಟ್ಟಡ, ವಿವರಗಳು
ಹುಬ್ಬಳ್ಳಿ, ಅಕ್ಟೋಬರ್ 09; ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ವಿಸ್ತರಣೆ ಮಾಡಲು ಒಪ್ಪಿಗೆ ಕೊಟ್ಟಿದೆ. ದೇಶಿಯ ವಿಮಾನಯಾನ ಸೇವೆಗಾಗಿಯೇ ಹೊಸ ಟರ್ಮಿನಲ್ ನಿರ್ಮಾಣವಾಗಲಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. ಈ ಯೋಜನೆಯ ನಿರ್ಮಾಣ ಕಾಮಗಾರಿಯ ವೆಚ್ಚ ಸುಮಾರು 260.23 ಕೋಟಿಯಾಗಿದೆ.

ಕೆಲವು ದಿನಗಳ ಹಿಂದೆ ಟರ್ಮಿನಲ್ ವಿಸ್ತರಣೆ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಆಗ ಟ್ವಿಟ್ ಮಾಡಿದ್ದ ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, 'ಹೊಸ ಟರ್ಮಿನಲ್ 20 ಸಾವಿರ ಚದರ ಮೀಟರ್ (ನೆಲ ಮತ್ತು ಮೊದಲ ಮಹಡಿ) ವಿಸ್ತೀರ್ಣ ಇರಲಿದೆ" ಎಂದು ಹೇಳಿದ್ದರು.
ಯಾವಾಗ ಕಾಮಗಾರಿ ಆರಂಭ?; 2024ರ ಜನವರಿಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಒಟ್ಟು 24 ತಿಂಗಳಿನಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಟೆಂಟರ್‌ನಲ್ಲಿ ಷರತ್ತು ಹಾಕಲಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆಯ ಅವಧಿಯಲ್ಲಿ ಗರಿಷ್ಠ 1400 ಪ್ರಯಾಣಿಕರ ನಿರ್ವಹಣೆ ಮಾಡುವ ರೀತಿ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತದೆ. ಈ ಟರ್ಮಿನಲ್ ವಿಸ್ತರಣೆ ಯೋಜನೆಯಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಸಹಾಯಕವಾಗಲಿದೆ.
ಸದ್ಯ ಇರುವ ವಿಮಾನ ನಿಲ್ದಾಣ ಟರ್ಮಿನಲ್ ಪ್ರಯಾಣಿಕ ದಟ್ಟಣೆಯ ಅವಧಿಯಲ್ಲಿ ಗಂಟೆಗೆ 300 ಪ್ರಯಾಣಿಕರ ನಿರ್ವಹಣೆ ವ್ಯವಸ್ಥೆಯನ್ನು ಹೊಂದಿದೆ. ವಿಸ್ತರಣೆ ಬಳಿಕ ವಾರ್ಷಿಕ 0.05 ಮಿಲಿಯನ್ ಪ್ರಯಾಣಿಕರ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.
ಈಗಿರುವ ಹಳೆಯ ಟರ್ಮಿನಲ್ ಕಟ್ಟಡದ ಪಕ್ಕದಲ್ಲಿಯೇ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣವಾಗಲಿದೆ. ಹೊಸ ಕಟ್ಟಡ ಉದ್ಘಾಟನೆಗೊಂಡ ಬಳಿಕ ಹಳೆ ಕಟ್ಟಡವನ್ನು ಪ್ರಯಾಣಿಕರ ಆಗಮನಕ್ಕಾಗಿ ಮಾತ್ರ ಬಳಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟರ್ಮಿನಲ್ ಕಟ್ಟಡ ವಿಸ್ತರಣೆ ಜೊತೆಗೆ ವಾಹನಗಳ ಪಾರ್ಕಿಂಗ್‌ಗೆ ಸಹ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. 500 ಕಾರು, 10 ಬಸ್, 100 ಟ್ಯಾಕ್ಸಿ, ಬೈಕ್ ಮತ್ತು ಸಿಬ್ಬಂದಿಗಳ ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲು ಯೋಜನೆ ರೂಪಿಸಲಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣ ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರವಾಗಿದ್ದು, ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ದೇಶದ ವಿವಿಧ ನಗರಗಳಿಂದ ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವಲ್ಲಿ ವಿಮಾನ ನಿಲ್ದಾಣ ಪ್ರಮುಖ ಪಾತ್ರ ವಹಿಸುತ್ತದೆ.
ಧಾರವಾಡ ಕರ್ನಾಟಕದ ವಿದ್ಯಾಕಾಶಿಯಾಗಿದೆ. ಐಐಟಿ ಸೇರಿದಂತೆ ಹಲವಾರು ಉನ್ನತ ಶಿಕ್ಷಣದ ಕಾಲೇಜುಗಳಿವೆ. ಬೃಹತ್ ಕೈಗಾರಿಕಾ ಸಂಸ್ಥೆಗಳನ್ನು ಹೊಂದಿರುವ ಧಾರವಾಡ ಜಿಲ್ಲೆಗೆ ಭವಿಷ್ಯದಲ್ಲಿ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ ಗಮನದಲ್ಲಿಟ್ಟುಕೊಂಡು ಟರ್ಮಿನಲ್ ಕಟ್ಟಡ ವಿಸ್ತರಣೆ ಯೋಜನೆ ಕೈಗೊಳ್ಳಲಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡ ವಿಸ್ತರಣೆ, ರನ್ ವೇ ವಿಸ್ತಿರ್ಣ ಹೆಚ್ಚಳ, ಕಾರ್ಗೋ ಸೇವೆ ಮುಂತಾದವುಗಳ ಕುರಿತು ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರವನ್ನು ಬರೆದು ಗಮನ ಸೆಳೆಯಲಾಗಿತ್ತು. ಎಲ್ಲಾ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ ಟರ್ಮಿನಲ್ ಕಟ್ಟಡವನ್ನು ವಿಸ್ತರಣೆ ಮಾಡಲು ಒಪ್ಪಿಗೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ.
ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣಗೊಂಡ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗುವ ನಿರೀಕ್ಷೆ ಇದೆ. ದೇಶದ ಹಲವು ನಗರಗಳಿಗೆ ಹುಬ್ಬಳ್ಳಿಯಿಂದ ವಿಮಾನ ಸೇವೆಯನ್ನು ಆರಂಭಿಸಲು ಸಹ ಅನುಕೂಲವಾಗಲಿದೆ.












Click it and Unblock the Notifications