Shiggaon Assembly Constituency Analysis: ಶಿಗ್ಗಾಂವಿಯಲ್ಲಿ ಸಿಎಂಗೆ ಸವಾಲಾದ 'ಕೈ' ಚಳಕ- ವಿವರ, ವಿಶ್ಲೇಷಣೆ
ಈ ಬಾರಿ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಪೈಪೋಟಿ ಇದೆ. ಕಾಂಗ್ರೆಸ್ ಬಿಜೆಪಿ ಸೆಣಸಲಿವೆ. ಇದಕ್ಕೆ ಸಂಬಂಧಿಸಿದ ವರದಿ, ವಿಶ್ಲೇಷಣೆ ಓದಿ.
ಶಿಗ್ಗಾಂವ, ಫೆಬ್ರವರಿ 20: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು, ರಾಜಕೀಯ ನಾಯಕರು ತಮ್ಮ, ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರವನ್ನು ಆರಂಭಿಸಿದ್ದಾರೆ. ಕ್ಷೇತ್ರಗಳನ್ನು ಬಿಟ್ಟು ಕದಲದೆ ಅಲ್ಲಿಯೇ ಇದ್ದು ಮತದಾರರನ್ನು ತಮ್ಮ ಪಕ್ಷಗಳತ್ತ ಸೆಳೆಯಲು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಹಾಗೆಯೇ ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಚುನಾವಣೆಯ ಕಾವು ಹೇಗಿದೆ ಅನ್ನುವುದನ್ನು ತಿಳಿಯೋಣ ಬನ್ನಿ.
ಹಾವೇರಿ ಜಿಲ್ಲೆಯು ಉತ್ತರ ಕರ್ನಾಟಕದ ಹೆಬ್ಬಾಗಿಲು, ಯಾಲಕ್ಕಿ ನಾಡು ಅಂತಲೇ ಹೆಸರುವಾಸಿಯಾಗಿದೆ. ಚಿಕ್ಕ ಜಿಲ್ಲೆಯಾದರೂ ಇಲ್ಲಿ ಹಲವು ವೈವಿಧ್ಯೆತೆಗಳನ್ನು ಕಾಣಬಹುದಾಗಿದೆ. ಹಾವೇರಿ ಜಿಲ್ಲೆಯು ಹಲವು ಪ್ರಖ್ಯಾತ ವ್ಯಕ್ತಿಗಳಿಗೆ ಜನ್ಮ ನೀಡಿದ ನೆಲವೂ ಕೂಡ ಆಗಿದೆ. ಇದೀಗ ಸಿಎಂ ಬಸವರಾಜ ಬೊಮ್ಮಾಯಿಯವರ ತವರು ಕ್ಷೇತ್ರವು ಕೂಡ ಹಾವೇರಿ ಜಿಲ್ಲೆಯಾಗಿದೆ.
ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ಕಾಂಗ್ರೆಸ್ ತಂತ್ರಗಾರ ರೂಪಿಸುತ್ತಿದೆ. ಜಾತಿವಾರು ಲೆಕ್ಕಾಚಾರದಲ್ಲಿರುವ ನಾಯಕರ ಆಯ್ಕೆಯ ಹಿಂದೆ "ಕೈ" ನಾಯಕರು ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಶಿಗ್ಗಾಂವಿಯಲ್ಲಿ ಕಣಕ್ಕಿಳಿಸುವ ಬಗ್ಗೆ ಮಾತುಗಳುಗಳು ಕೇಳಿಬರುತ್ತಿವೆ.

ಕಾಂಗ್ರೆಸ್ ಲೆಕ್ಕಾಚಾರ ಏನು?, ಇಲ್ಲಿದೆ ವಿವರ
ವಿನಯ್ ಕುಲಕರ್ಣಿ ಧಾರವಾಡ ಜಿಲ್ಲೆಯವರಾಗಿದ್ದಾರೆ. ಹಾಗೆಯೇ ಇನರು ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಪಂಚಮಸಾಲಿಗಳೇ ಅಧಿಕವಾಗಿದ್ದು, ಎರಡನೇಯ ಸಮುದಾಯ ಮುಸ್ಲಿಮರಿದ್ದಾರೆ. ಮೂರನೆಯದಾಗಿ ಕುರುಬರು ಇದ್ದಾರೆ. ಹೀಗೆ ಜಾತಿ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ಗಮನಿಸುವುದಾದರೆ, ವಿನಯ್ ಕುಲಕರ್ಣಿ ಕಡೆಗೆ "ಕೈ" ನಾಯಕರ ಒಲವಿರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ವಿನಯ್ ಕುಲಕರ್ಣಿ ಸ್ಪರ್ಧಿಸಿದರೆ, ಶಿಗ್ಗಾಂವಿಯಲ್ಲಿ ಭಾರೀ ಪೈಪೋಟಿ ನಡೆಯಲಿದೆ ಎಂಬುದನ್ನೂ ಕೂಡ ತೆಗೆದು ಹಾಕುವಂತಿಲ್ಲ. ಹೀಗೆ ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದೆ.

ಸಿಎಂ ವಿರುದ್ಧ ಕಾಳಗಕ್ಕೆ ಸಜ್ಜಾದ ನಾಯಕ ಯಾರು?
ಹಾವೇರಿಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದ ಬಸವರಾಜ ಬೊಮ್ಮಾಯಿ, ಸದ್ಯ ಕರ್ನಾಟಕದ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾವಿ ಈ ಬಾರಿ ಭಾರಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯಿಂದಲೇ ಸಿಡಿದೆದ್ದು ಕಾಂಗ್ರೆಸ್ ಪಕ್ಷವನ್ನು ಸೇರಿರುವ ರಾಜಕಾರಣಿಯೊಬ್ಬರು ಸಿಎಂ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾರೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಲ್ಳದೆ ನನ್ನ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ ಎನ್ನುವ ನಂಬಿಕೆಯಲ್ಲಿದ್ದಾರೆ.

ಸಿಎಂ ತವರು ಕ್ಷೇತ್ರದಲ್ಲಿ ಪೈಪೋಟಿ ಹೇಗಿದೆ?
ಶಿಗ್ಗಾಂವಿ ಹಾವೇರಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರವಾಗಿದೆ. 1997-98ರಲ್ಲಿ ಧಾರವಾಡ ಜಿಲ್ಲೆಯನ್ನು ವಿಭಜನೆ ಮಾಡಿದ ಸಂದರ್ಭದಲ್ಲಿ ಏಳು ತಾಲೂಕುಗಳನ್ನು ಸೇರಿಸಿ ಹಾವೇರಿ ಜಿಲ್ಲೆ ರಚನೆ ಮಾಡಲಾಯಿತು. ಇದು ಕನ್ನಡದ ಮೊದಲ ಮಹಮ್ಮದಿಯ ಕವಿ ಶಿಶುವಿನಹಾಳ ಶರೀಫ ಶಿವಯೊಗಿಗಳು ಜನಿಸಿದ ಸ್ಥಳವಾಗಿದೆ. ಹಾಗೂ ಕನಕದಾಸರು ಜನಿಸಿದ ಬಾಡ ಗ್ರಾಮವು ಕೂಡ ಇದೆ ತಾಲೂಕಿನಲ್ಲಿರುವುದೇ ಒಂದು ವಿಶೇಷವಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಸದ್ಯ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮ ನೀಡಿದ್ದು ಧಾರವಾಡ ಜಿಲ್ಲೆಯಾದರೆ, ರಾಜಕೀಯವಾಗಿ ಜನ್ಮ ನೀಡಿದ್ದು ಶಿಗ್ಗಾಂವಿ ಕ್ಷೇತ್ರವಾಗಿದೆ ಅನ್ನುವುದೇ ಒಂದು ವಿಶೇಷಾವಾಗಿದೆ.

ತಂದೆಯ ಹಾದಿಯಲ್ಲೇ ಸಾಗಿದ್ರಾ ಸಿಎಂ ಬೊಮ್ಮಾಯಿ?
ಬಸವರಾಜ ಬೊಮ್ಮಾಯಿ ಅವರದ್ದು ರಾಜಕೀಯ ಹಿನ್ನೆಲೆಯ ಕುಟುಂಬವಾಗಿದೆ. ಇವರ ತಂದೆ ಎಸ್.ಆರ್. ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು. ಅಪ್ಪನಂತೆಯೇ ಮಗನೂ ಕೂಡ ಜನಾತದಳದಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು. 1998 ಹಾಗೂ 2004ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ನಂತರ 2008ರಲ್ಲಿ ಜನತಾದಳವನ್ನು ತೊರೆದು ಭಾರತೀಯ ಜನಾತಾ ಪಕ್ಷವನ್ನು ಸೇರಿಕೊಂಡರು. 2008ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆ ಆಗಿದ್ದರು. ಬಳಿಕ 2013, 2018ರಲ್ಲಿ ಮತ್ತೆ ಆಯ್ಕೆಯಾದರು. ಒಟ್ಟಾರೆಯಾಗಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಿಂದಲೇ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

ಸಿಎಂ ಪಟ್ಟ ಅಲಂಕರಿಸಿದ್ದು ಯಾವಾಗ?
ಇನ್ನು ಮಾಜಿ ಸಿಎಂ ಜೆ.ಎಚ್. ಪಟೇಲ್ ಸಿಎಂ ಆಗಿದ್ದ ಸಮಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಆಗಿದ್ದರು. ನಂತರ ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು. ಬಳಿಕ ಜುಲೈ 28, 2021ರಂದು ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದರು.

ಶಿಗ್ಗಾಂವಿ ಕ್ಷೇತ್ರದಲ್ಲಿ ಭಾರಿ ಪೈಪೋಟಿ
ಬಸವರಾಜ ಬೊಮ್ಮಾಯಿ ಅವರು ಕಳೆದ ಎರಡು ಬಾರಿಯೂ ಆಯ್ಕೆಯಾಗಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ ಬಿಜೆಪಿಯ ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಅವರು ಬಸವರಾಜ ಬೊಮ್ಮಾಯಿ ವಿರುದ್ದ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಕಳೆದ ಬಾರಿ ಪಕ್ಷೇತರರಾಗಿ ಸೋತಿದ್ದ ಸೋಮಣ್ಣ ಬೇವಿನಮರದ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ತಯಾರಾಗಿದ್ದಾರೆ. ಮತ್ತೊಂದು ಕಡೆ ನಾಲ್ಕು ಬಾರಿ ಶಿಗ್ಗಾಂವಿಯಲ್ಲಿ ಸ್ಪರ್ಧಿಸಿ ಸೋತಿರುವ ಮಾಜಿ ಶಾಸಕ ಅಜೀಂಪೀರ್ ಖಾದ್ರಿ ಈ ಬಾರಿಯೂ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಇವರ ಜೊತೆಗೆ ಶಶಿಧರ್ ಯಲಿಗಾರ, ಅಲ್ಪಸಂಖ್ಯಾತ ಮುಖಂಡ ಯಾಸಿರ್ಖಾನ್ ಪಠಾಣ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಿಷ್ಯನಾದ ಎಸ್.ಎಸ್. ಶಿವಳ್ಳಿ, ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ್ ಕುಮಾರ್ ನೀರಲಗಿ ಶಿಗ್ಗಾಂವಿ ಟಿಕೆಟ್ಗಾಗಿ ಇನ್ನಿಲ್ಲಿದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಹಾಗೆಯೇ ಜೆಡಿಎಸ್ ಯಾರಿಗೆ ಮಣೆ ಹಾಕಲಿದೆ ಎನ್ನುವುದು ಇನ್ನು ತಿಳಿದುಬಂದಿಲ್ಲ.

ಲಿಂಗಾಯತ ಮತದಾರರದ್ದೇ ಮೈಲುಗೈ
ಇನ್ನು ಜಾತಿ ಲೆಕ್ಕಾಚಾರಕ್ಕೆ ಬಂದರೆ ಇಲ್ಲಿಯೂ ಕೂಡ ಲಿಂಗಾಯತರದ್ದೇ ಮೇಲುಗೈಯಾಗಿದೆ. ಇದನ್ನು ಬಿಟ್ಟರೇ ಮುಸ್ಲೀಂ ಮತಗಳು ನಿರ್ಣಾಯಕವಾಗಿವೆ. ಸುಮಾರು 65,000 ಲಿಂಗಾಯತರು ಮತದಾರರಿದ್ದರೆ, ಮುಸ್ಲಿಂ -52,000, ಕುರುಬ 32,000, ಲಂಬಾಣಿ 22,000 ಹಾಗೂ ಸುಮಾರು 25,000 ದಲಿತ ಮತದಾರರಿದ್ದಾರೆ ಎನ್ನಲಾಗಿದೆ. ಹೀಗೆ ಜಾತಿ ಲೆಕ್ಕಾಚಾರದಲ್ಲಿ ನೋಡಿದರೆ ಇಲ್ಲಿ ಲಿಂಗಾಯತ ಮತದಾರರೇ ಹೆಚ್ಚಾಗಿದ್ದು, ಈ ಭಾಗದಲ್ಲಿನ ಲಿಂಗಾಯತ ಮತದಾರರ ಮನವೊಲಿಸಲು ರಾಜಕಾರಣಿಗಳು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.
ಶಿಗ್ಗಾಂವಿ ಕ್ಷೇತ್ರದ ಅಖಾಡದಲ್ಲಿ ಭಾರಿ ಪೈಪೋಟಿಗಳು ನಡೆಯುತ್ತಲೇ ಇವೆ. ಇದೇ ಕ್ಷೇತ್ರದಲ್ಲಿ ಸತತವಾಗಿ ಆಯ್ಕೆ ಆದ ಬಸವರಾಜ ಬೊಮ್ಮಯಿ ಅವರು ಪೈಪೋಟಿಯ ನಡುವೆಯೂ ಈ ಬಾರಿ ಜಯ ಸಾಧಿಸಲಿದ್ದಾರೆಯ ಅನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications