'ಬೆಂಗಳೂರು ಟ್ರಾಫಿಕ್ ಪ್ರತಿದಿನ ನಿಮ್ಮ ತಾಳ್ಮೆ ಪರೀಕ್ಷಿಸುತ್ತದೆ': ಮುಂಬೈನಿಂದ ಸಿಲಿಕಾನ್ ಸಿಟಿಗೆ ಬಂದ ಉದ್ಯಮಿಯ ಅನುಭವ
ಮುಂಬೈನಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿಳಿದ ಉದ್ಯಮಿಯೊಬ್ಬರು ತಮ್ಮ ಮೊದಲ ವಾರದ ಅನುಭವಗಳನ್ನು ಎಕ್ಸ್ ಖಾತೆಯಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ನಗರದ ಸ್ಟಾರ್ಟ್‌ಅಪ್ ಸಂಸ್ಕೃತಿ, ಆಹ್ಲಾದಕರ ಹವಾಮಾನ, ವಾಹನ ದಟ್ಟಣೆ ಮತ್ತು ಜೀವನಶೈಲಿಯ ಬಗ್ಗೆ ಅವರು ಮಾಡಿರುವ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕಲ್ಪೇಶ್ ಭಾಲೇಕರ್ ಎಂಬ ಉದ್ಯಮಿಯೇ ತಮ್ಮ ಈ ಭಿನ್ನ ಅನುಭವಗಳನ್ನು ಬಿಚ್ಚಿಟ್ಟವರು. ಇದು ಹೊಸದಾಗಿ ಬೆಂಗಳೂರಿಗೆ ಬರುವವರಿಗೆ ಒಂದು ಮಾರ್ಗದರ್ಶಿಯಂತೆಯೂ ಇದೆ.

ಮುಂಬೈನಿಂದ ಬೆಂಗಳೂರಿಗೆ
ಉದ್ಯಮಿ ಕಲ್ಪೇಶ್ ಭಾಲೇಕರ್ ತಮ್ಮ ಪೋಸ್ಟ್‌ನಲ್ಲಿ, "ಬೆಂಗಳೂರು ಆರಂಭದಲ್ಲಿ ಸ್ವಲ್ಪ ಏಕಾಂಗಿ ಎನಿಸಬಹುದು, ಏಕೆಂದರೆ ಇಲ್ಲಿರುವ ಬಹುತೇಕರು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ದೇಶದ ವಿವಿಧ ಮೂಲೆಗಳಿಂದ ಬಂದವರಾಗಿದ್ದಾರೆ. ಆದರೆ, ಹೌಸ್ ಪಾರ್ಟಿಗಳು, ಬೋರ್ಡ್ ಗೇಮ್ಸ್, ರನ್ನಿಂಗ್ ಕ್ಲಬ್‌ಗಳು ಮತ್ತು ನೆಟ್‌ವರ್ಕಿಂಗ್ ಈವೆಂಟ್‌ಗಳ ಮೂಲಕ ಸಮಾನ ಮನಸ್ಕರನ್ನು ಭೇಟಿಯಾಗಲು ನಗರವು ಸಾಕಷ್ಟು ಅವಕಾಶಗಳನ್ನು ನೀಡುತ್ತದೆ" ಎಂದಿದ್ದಾರೆ.
ಹೊಸದಾಗಿ ನಗರಕ್ಕೆ ಬರುವವರು ಕೇವಲ ಲಾಭದಾಯಕ ಹಾಗೂ ವ್ಯವಹಾರಿಕ ಸಂಬಂಧಗಳನ್ನು ಬೆಳೆಸುವ ಬದಲು, ಒಳ್ಳೆಯ ಉದ್ದೇಶ ಹೊಂದಿರುವ ಜನರೊಂದಿಗೆ ಬೆರೆಯುವಂತೆ ಅವರು ಉಪಯುಕ್ತ ಸಲಹೆ ನೀಡಿದ್ದಾರೆ.
ಉದ್ಯಮಶೀಲತೆಯ ತವರೂರು
"ಈ ನಗರವು ಸದಾ ಹೊಸದನ್ನು ಕಟ್ಟುವ ಗೀಳು ಹೊಂದಿದೆ. ಕೇವಲ ಒಂದು ವಾರದಲ್ಲಿ ನಾನು 15ಕ್ಕೂ ಹೆಚ್ಚು ಸ್ಟಾರ್ಟ್‌ಅಪ್ ಸಂಸ್ಥಾಪಕರನ್ನು ಭೇಟಿಯಾಗಿದ್ದೇನೆ. ಇಲ್ಲಿ ನಡೆಯುವ ಪ್ರತಿಯೊಂದು ಮಾತುಕತೆಯು ಅಂತಿಮವಾಗಿ ತಂತ್ರಜ್ಞಾನದ ಮೂಲಕ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದರ ಸುತ್ತಲೇ ಸುತ್ತುತ್ತದೆ" ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ತಿಂಗಳಿಗೆ ಕೇವಲ $500 ಆದಾಯ ಹೊಂದಿರುವ ಸಂಸ್ಥಾಪಕರೊಬ್ಬರು $20 ಮಿಲಿಯನ್ ಮೌಲ್ಯಮಾಪನದಲ್ಲಿ ಫಂಡ್ ರೈಸ್ ಮಾಡಲು ತಯಾರಿ ನಡೆಸುತ್ತಿರುವುದನ್ನು ಕಂಡು, ಈ ನಗರವು ತಮ್ಮನ್ನು 'ಇನ್ನಷ್ಟು ದೊಡ್ಡದಾಗಿ ಯೋಚಿಸುವಂತೆ' ಪ್ರೇರೇಪಿಸಿದೆ ಎಂದಿದ್ದಾರೆ. ರೆಸ್ಯೂಮ್‌ನಲ್ಲಿ ಏನಿದೆ ಎನ್ನುವುದಕ್ಕಿಂತ, ವ್ಯಕ್ತಿ ಏನು ಹೊಸದಾಗಿ ಮಾಡಲು ಪ್ರಯತ್ನಿಸುತ್ತಿದ್ದಾನೆ ಎನ್ನುವುದಕ್ಕೆ ಇಲ್ಲಿ ಹೆಚ್ಚು ಬೆಲೆ ಇದೆ ಮತ್ತು ಲಿಂಕ್ಡ್‌ಇನ್‌ಗಿಂತ ಮುಂಚಿತವಾಗಿ ಟ್ವಿಟರ್ ಖಾತೆಗಳನ್ನು ವಿನಿಮಯ ಮಾಡಿಕೊಳ್ಳುವ ಮೊದಲ ನಗರ ಇದಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.
ಆಹ್ಲಾದಕರ ಹವಾಮಾನ ಮತ್ತು ಬೆಂಗಳೂರು ಟ್ರಾಫಿಕ್
ಬೆಂಗಳೂರಿನ ಹವಾಮಾನವನ್ನು ಮನಸಾರೆ ಹೊಗಳಿರುವ ಭಾಲೇಕರ್, "ಮುಂಬೈನಿಂದ ಇಲ್ಲಿಗೆ ಬಂದ ಮೇಲೆ ಬೆವರುವುದು ಎಂದರೆ ಹೇಗಿರುತ್ತದೆ ಎಂಬುದನ್ನೇ ನಾನು ಸಂಪೂರ್ಣವಾಗಿ ಮರೆತಿದ್ದೇನೆ" ಎಂದಿದ್ದಾರೆ. ಇಲ್ಲಿನ ಆರೋಗ್ಯಕರ ಆಹಾರ ಪದ್ಧತಿ ಹಾಗೂ ಸ್ವಚ್ಛತೆಯನ್ನು ಅವರು ಮೆಚ್ಚಿಕೊಂಡಿದ್ದಾರೆ.
ಆದರೆ, ಬೆಂಗಳೂರಿನ ಅತಿದೊಡ್ಡ ನ್ಯೂನತೆ ಎಂದರೆ ಇಲ್ಲಿನ ಟ್ರಾಫಿಕ್ ಎಂದು ಎಚ್ಚರಿಸಿದ್ದಾರೆ. "ನೀವು ಯಾವ ಬಟ್ಟೆ ಧರಿಸಬೇಕು ಎಂದು ಯೋಚಿಸುವ ಮೊದಲೇ, ನೀವು ಹೇಗೆ ಪ್ರಯಾಣಿಸಬೇಕು ಎಂಬುದನ್ನು ಪ್ಲಾನ್ ಮಾಡಿ" ಎಂದು ಅವರು ತಮಾಷೆಯಾಗಿ ಹೇಳಿದ್ದಾರೆ. "ಒಟ್ಟಾರೆಯಾಗಿ ಬೆಂಗಳೂರು ಪರಿಪೂರ್ಣವಲ್ಲ. ಇಲ್ಲಿನ ಟ್ರಾಫಿಕ್ ಪ್ರತಿದಿನ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಆದರೆ ನೀವು ಮಹತ್ವಾಕಾಂಕ್ಷಿಯಾಗಿದ್ದರೆ, ಇದು ಅತ್ಯಂತ ಶಕ್ತಿಯುತ ನಗರ" ಎಂದು ಬರೆದಿದ್ದಾರೆ.
My first week moving from Mumbai to Bangalore, here's what I noticed:
— Kalpesh Bhalekar (@Kalpeshb04) June 25, 2026
1. Bangalore can be a lonely city. Most people have left home to build a career here. That's why house parties, board game nights, screenings, running clubs, and dating apps are everywhere.
Find a few people… https://t.co/cV623gaHmk
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಅವರ ಮಾತಿಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ. "ಬೆಂಗಳೂರಿನ ಬಹುಪಾಲು ಜನಸಂಖ್ಯೆಯು ಸಂಬಳ ಪಡೆಯುವ ವರ್ಗವಾಗಿದೆ. ನೀವು ಹೇಳುತ್ತಿರುವ ಸ್ಟಾರ್ಟ್‌ಅಪ್ ಬಿಲ್ಡರ್‌ಗಳು ಕೇವಲ 1 ಅಥವಾ 2 ಪ್ರದೇಶಗಳಲ್ಲಿದ್ದಾರೆ. ಉಳಿದವರಿಗೆ ಈ ನಗರ ಕೇವಲ ಉದ್ಯೋಗವಷ್ಟೇ" ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
ಮತ್ತೊಬ್ಬರು, "ಹೊಸದಾಗಿ ಬೆಂಗಳೂರಿಗೆ ಬರುವವರು ಕೆಲಸದ ಸ್ಥಳಕ್ಕೆ ಹತ್ತಿರವಿರುವಂತೆ ವಸತಿ ಆಯ್ಕೆ ಮಾಡಿಕೊಳ್ಳಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸಿಸುತ್ತಾ ಹೆಬ್ಬಾಳಕ್ಕೆ ಕೆಲಸಕ್ಕೆ ಹೋಗುವುದು ಸರಿಯಲ್ಲ" ಎಂದು ಕಿವಿಮಾತು ಹೇಳಿದ್ದಾರೆ. ಇನ್ನು ಹವಾಮಾನದ ಬಗ್ಗೆ ಭಾಲೇಕರ್ ಅವರ ಅಭಿಪ್ರಾಯ ನೂರಕ್ಕೆ ನೂರು ಸತ್ಯ ಎಂದು ಹಲವರು ಒಪ್ಪಿಕೊಂಡಿದ್ದಾರೆ.












Click it and Unblock the Notifications