Karnataka Rains: ಜೂನ್ 30ರಿಂದ ಉತ್ತರ ಕರ್ನಾಟಕ ಸೇರಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಆರೆಂಜ್-ಯೆಲ್ಲೋ ಅಲರ್ಟ್
ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ನೆನ್ನೆ ಉತ್ತರಮ ಮಳೆ ದಾಖಲಾಗಿದೆ. ಉತ್ತರ ಕರ್ನಾಟಕದ ಒಂದೆರಡು ಪ್ರದೇಶಗಳಲ್ಲಿ ಸಾಮಾನ್ಯ ಮಳೆ ಆಗಿದೆ. ಇದೇ ರೀತಿಯ ವಾತಾವರಣ ಮುಂದಿನ 4 ದಿನ ಮುಂದುವರಿಯಲಿದೆ. ಜೂನ್ 30ರಿಂದ ಮುಂಗಾರು ಮಳೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದ್ದು, ಕೆಲವು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ನಾಡಿನ ಸಂಪೂರ್ಣ ಹವಾಮಾನ ವರದಿ ಇಲ್ಲಿದೆ.
ಕರಾವಳಿ ಕರ್ನಾಟಕಕ್ಕೆ ಸಾಧಾರಣದಿಂದ ಭಾರೀ ಮಳೆ (65 ಮಿಲಿ ಮೀಟರ್ 115 ಮಿಲಿ ಮೀಟರ್) ಆಗಲಿದ್ದು, ಇಂದಿನಿಂದ ಮುಂದಿನ ನಾಲ್ಕು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದೇ ಅವಧಿಯಲ್ಲಿ ಬೆಂಗಳೂರಿನ ನಗರ ಸೇರಿದಂತೆ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ನಿರೀಕ್ಷಿಸಬಹುದು.

ಜೂನ್ 30 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಲಿದೆ. ಅಂದು ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಆಗಲಿದೆ. 115ರಿಂದ 200 ಮಿಲಿ ಮೀಟರ್ ವರೆಗೆ ಬಿರುಗಾಳಿ ಸಹಿತ ಭಾರೀ ಮಳೆ ಆಗುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಜುಲೈ 2ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಇಂದಿನ ಹವಾಮಾನ ಮುನ್ಸೂಚನಾ ವರದಿಯಲ್ಲಿ ಐಎಂಡಿ ವಿಜ್ಞಾನಿಗಳು ತಿಳಿಸಿದ್ದಾರೆ.
ಇನ್ನೂ ಇದೇ ಅವಧಿಯಲ್ಲಿ ಮುಂಗಾರು ಕೊರತೆ ಕಂಡ ಕರ್ನಾಟಕದ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ಎರಡರಿಂದ ಮೂರು ದಿನ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗಲಿದ್ದು, ಈ ಜಿಲ್ಲೆಗಳು ಯೆಲ್ಲೋ ಅಲರ್ಟ್ ಪಡೆದಿವೆ. ಒಂದು ದಿನ ಯಾದಗಿರಿಗೂ ಧಾರಾಕಾರ ಮಳೆ ನಿರೀಕ್ಷೆ ಇದೆ.
ಬೆಂಗಳೂರು ಹವಾಮಾನ ಮುನ್ಸೂಚನೆ ಇಲ್ಲಿದೆ
ಬೆಂಗಳೂರಿನಲ್ಲಿ ಮುಂದಿನ ನಾಲ್ಕರಿಂದ ಐದು ದಿನಗಳ ಕಾಲ ಮಳೆ ನಿರೀಕ್ಷೆ ಇದೆ. ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಬಿಸಿಲಿನ ದರ್ಶನವಾಗಬಹುದು. ನಂತರ ಮಬ್ಬು ಕವಿದ ತಂಪು ವಾತಾವರಣ ಅಲ್ಲಲ್ಲಿ ಕಂಡು ಬರಲಿದೆ. ಕೆಲವೆಡೆ ಹಗುರ ಮಳೆ ಆದರೆ, ಇನ್ನೂ ಹಲವೆಡೆ ಜೋರು ಗಾಳಿ ಸಹಿತ ಸಾಧಾರಣ ಮಳೆ ನಿರೀಕ್ಷೆ ಇದೆ. ಈ ಅವಧಿಯಲ್ಲಿ ಗರಿಷ್ಠ ತಾಪಮಾನ 29-30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20-21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೆನ್ನೆ ವಿವಿಧ ಭಾಗಗಳಲ್ಲಿ ಮಳೆ ದಾಖಲಾತಿ
ಕರಾವಳಿ ಜಿಲ್ಲೆಗಳು ಸೇರಿದಂತೆ ಮೂಡಬಿದರಿ, ಕಾರವಾರ, ಉಡುಪಿ ಭಾಗದಲ್ಲಿ ಜೋರು ಮಳೆ ಆಗಿದೆ. ಉಳಿದಂತೆ ಬೆಳಗಾವಿ, ಹಾವೇರಿ, ವಿಜಯಪುರ, ಕಲಬುರಗಿ, ಕೊಪ್ಪಳ, ಮಳವಳ್ಳಿ, ಬೆಂಗಳೂರಿನ ಜಿಕೆವಿಕೆ, ಹುಣಸೂರು ಹೀಗೆ ವಿವಿಧೆಡೆ ಹಗುರದಿಂದ ಸಾಧಾರಣ ಮಳೆ ದಾಖಲಾಗಿದೆ.













Click it and Unblock the Notifications