Adani Foundation: ಗೌತಮ್ ಅದಾನಿ ಬರ್ತ್‌ಡೇ ಪ್ರಯುಕ್ತ ರಕ್ತದಾನ ಅಭಿಯಾನ: 1.56 ಲಕ್ಷ ರೋಗಿಗಳಿಗೆ ಜೀವದಾನ
ಅದಾನಿ ಸಮೂಹದ (Adani Groups) ಸಂಸ್ಥಾಪಕ ಗೌತಮ್ ಅದಾನಿ ಅವರ 64ನೇ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಅದಾನಿ ಫೌಂಡೇಶನ್ ದೇಶಾದ್ಯಂತ ಅತ್ಯಂತ ಬೃಹತ್ ಪ್ರಮಾಣದ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಮಹಾ ಅಭಿಯಾನದಲ್ಲಿ ದಾಖಲೆಯ 52,306 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಈ ಮೂಲಕ ಅದಾನಿ ಫೌಂಡೇಶನ್ ಸಮಾಜ ಸೇವೆಯಲ್ಲಿ ಒಂದು ಹೊಸ ಮೈಲಿಗಲ್ಲು ನಿರ್ಮಿಸಿದೆ.
ಜೂನ್ 24 ರಂದು ನಡೆದ ಈ ರಕ್ತದಾನ ಕಾರ್ಯಕ್ರಮದಲ್ಲಿ ನೂರಾರು ಸ್ವಯಂಸೇವಕರು ಮತ್ತು ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. "ಸೇವೆಯೇ ಸಾಧನೆ" ಎಂಬ ಉದಾತ್ತ ಧ್ಯೇಯದೊಂದಿಗೆ ನಡೆದ ಈ ಬೃಹತ್ ಅಭಿಯಾನವು ಭಾರತದ 21 ರಾಜ್ಯಗಳು ಹಾಗೂ 5 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 754 ಸ್ಥಳಗಳಲ್ಲಿ ಯಶಸ್ವಿಯಾಗಿ ಜರುಗಿತು.

ಈ ಅಭಿಯಾನದೊಂದಿಗೆ ವಿದೇಶದ ನಾಲ್ಕು ಕೇಂದ್ರಗಳಲ್ಲಿಯೂ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಕೇವಲ ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದ ರಕ್ತ ಸಂಗ್ರಹಿಸಿರುವುದು ಕಳೆದ ವರ್ಷ ಸಂಗ್ರಹಿಸಿದ್ದ 28,090 ಯೂನಿಟ್‌ಗಳ ದಾಖಲೆಯನ್ನು ಮೀರಿಸಿದೆ ಎಂದು ಫೌಂಡೇಶನ್ ಮಾಹಿತಿ ನೀಡಿದೆ.
1.56 ಲಕ್ಷ ರೋಗಿಗಳಿಗೆ ಸಂಜೀವಿನಿ
ಈ ಅಭಿಯಾನದ ಮೂಲಕ ಸಂಗ್ರಹಿಸಲಾದ ಸುಮಾರು 23,538 ಲೀಟರ್ ರಕ್ತವನ್ನು ಪ್ಲಾಸ್ಮಾ, ಪ್ಲೇಟ್‌ಲೆಟ್‌ಗಳು ಸೇರಿದಂತೆ ವಿವಿಧ ಪ್ರಮುಖ ರಕ್ತದ ಘಟಕಗಳಾಗಿ ಬೇರ್ಪಡಿಸಿ ಬಳಸಲಾಗುತ್ತದೆ. ಇದರಿಂದಾಗಿ ದೇಶಾದ್ಯಂತ ಸುಮಾರು 1.56 ಲಕ್ಷ ರೋಗಿಗಳಿಗೆ ತುರ್ತು ಚಿಕಿತ್ಸೆ, ಹೆರಿಗೆ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ರೆಡ್‌ಕ್ರಾಸ್, ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ಟ್ರಸ್ಟ್‌ಗಳ ಒಟ್ಟು 764 ರಕ್ತನಿಧಿಗಳ ಮುಖಾಂತರ ಈ ಸೇವಾ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಅಭಿಯಾನದ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿದ ಅದಾನಿ ಫೌಂಡೇಶನ್‌ನ ಅಧ್ಯಕ್ಷರಾದ ಡಾ. ಪ್ರೀತಿ ಅದಾನಿ ಅವರು, ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಮಾಜ ಸೇವೆಗೆ ಶ್ರಮಿಸುವ ಗೌತಮ್ ಅದಾನಿ ಅವರ ನಂಬಿಕೆಗೆ ಈ ನಿಸ್ವಾರ್ಥ ಕೊಡುಗೆ ಸಾಕ್ಷಿಯಾಗಿದೆ ಎಂದಿದ್ದಾರೆ. ದೇಶಾದ್ಯಂತ ವಿವಿಧ ವೈದ್ಯಕೀಯ ಸಿಬ್ಬಂದಿ, ತಜ್ಞರು, ಸಾಮಾನ್ಯ ನಾಗರಿಕರು ಹಾಗೂ ಅದಾನಿ ಸಮೂಹ ಸಂಸ್ಥೆಗಳ ನೌಕರರು ಸೇರಿದಂತೆ 6,000 ಕ್ಕೂ ಹೆಚ್ಚು ಸ್ವಯಂಸೇವಕರು ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಕಳೆದ 2011ರಲ್ಲಿ ಕೇವಲ 1,300 ಯೂನಿಟ್‌ಗಳ ರಕ್ತ ಸಂಗ್ರಹದೊಂದಿಗೆ ಅತ್ಯಂತ ಸರಳವಾಗಿ ಪ್ರಾರಂಭವಾಗಿದ್ದ ಈ ವಾರ್ಷಿಕ ಉಪಕ್ರಮವು, ಇಂದು ದೇಶದ ಅತಿ ದೊಡ್ಡ ಸ್ವಯಂಪ್ರೇರಿತ ರಕ್ತದಾನ ಅಭಿಯಾನವಾಗಿ ರೂಪಾಂತರಗೊಂಡಿದೆ. ಪ್ರಸ್ತುತ 22 ರಾಜ್ಯಗಳ ಸುಮಾರು 7,200ಕ್ಕೂ ಹೆಚ್ಚು ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಶಿಕ್ಷಣ ಹಾಗೂ ಉತ್ತಮ ಆರೋಗ್ಯಕ್ಕಾಗಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಅದಾನಿ ಫೌಂಡೇಶನ್, ಪ್ರಸ್ತುತ ಅಭಿಯಾನದ ಮೂಲಕ ಸಾಮಾನ್ಯ ಜನರ ಬದುಕಿನಲ್ಲಿ ಆಶಾಕಿರಣ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.













Click it and Unblock the Notifications