Haveri Rock Star Bull: ಲಕ್ಷಾಂತರ ಅಭಿಮಾನಿ ಗಳಿಸಿದ್ದ 'ಹಾವೇರಿ ರಾಕ್ ಸ್ಟಾರ್ ಹೋರಿ' ನಿಧನ: ಮಾಜಿ ಸಿಎಂ ಬೇಸರ
ಹಾವೇರಿ, ಏಪ್ರಿಲ್ 07: ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸಿನಿಮಾ ನಟರಂತೆ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದ, 'ಹಾವೇರಿ ರಾಕ್ ಸ್ಟಾರ್ ಹೋರಿ' (25) ವಯೋಸಹಜ ಕಾಯಿಲೆಯಿಂದ ಅಸುನೀಗಿದೆ. ಇದಕ್ಕೆ ಹಾವೇರಿ ಸೇರಿದಂತೆ ವಿವಿಧ ಭಾಗದ ಹೋರಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿಗಳು ಸಹ ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಹಾವೇರಿ ಜಿಲ್ಲೆ ಹೋರಿ ಹಬ್ಬದ ತವರೂರು. ಜಿಲ್ಲೆಯ ಸುತ್ತಮುತ್ತಲಿನ ಭಾಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಲೇ ಇರುತ್ತವೆ. ಎಲ್ಲಿ ಯಾವುದೇ ಸ್ಪರ್ಧೆಯಲ್ಲೂ ಈ 'ಹಾವೇರಿ ರಾಕ್ ಸ್ಟಾರ್ ಹೋರಿ' (ಎತ್ತು) ನದ್ದೆ ಆರ್ಭಟ ಕೇಳಿ ಬರುತ್ತಿತ್ತು. ಕಿವಿ ನಿಮಿರಿಸಿಕೊಂಡು ಓಡಲು ಶುರು ಮಾಡಿದರೆ, ಯಾರ ಕೈಗು ಸಿಗದೇ ಗುರಿ ತಲುಪಿ ಬಹುಮಾನವನ್ನು ತನ್ನ ಮಾಲೀಕನ ಮುಡಿಗೇರಿಸುತ್ತಿತ್ತು.

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೊದಲ ಬಹುಮಾನ
ಸರ್ಧೆಯಲ್ಲಿ ತನ್ನ ಚಾಣಾಕ್ಷತನ ಓಟದಿಂದ ಎಲ್ಲರನ್ನು ಹುಬ್ಬೇರಿಸುವಂತೆ ಮಾಡುತ್ತಿದ್ದ ಈ ಹೋರಿ, ಯಾವ ಸ್ಪರ್ಧೆಯ ಅಖಾಡಕ್ಕೆ ಎಂಟ್ರಿ ಕೊಟ್ಟರೆ ಮುಗಿಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರಾಕ್ ಸ್ಟಾರ್ ಪಾಲಾಯಿತು ಅಂತಲೇ ಅರ್ಥ. ಅಷ್ಟರ ಮಟ್ಟಿಗೆ ಉತ್ತಮ ಪ್ರದರ್ಶನ ನೀಡಿ ಹೆಸರು ಮಾಡಿದ್ದ ಹೋರಿ ಇದು.
ಸದ್ಯ 'ಹಾವೇರಿ ರಾಕ್ ಸ್ಟಾರ್ ಹೋರಿ' ಅಭಿಮಾನಿಗಳನ್ನು ಅಗಲಿದೆ. ವಯೋಸಹಜ ಕಾಯಿಲೆಗೆ ತುತ್ತಾಗಿ ಶನಿವಾರ (ಏಪ್ರಿಲ್ 06) ಮೃತಪಟ್ಟಿದೆ. ಹಾವೇರಿ ನಗರದ ನಾಗಿನಮಟ್ಟಿಯ ಚಿಕ್ಕಪ್ಪ, ಮಾರುತಿ, ಅಜ್ಜಪ್ಪ ಎಂಬುವವರಿಗೆ ಸೇರಿದ ಈ ಹೋರಿಗೆ ಅಪಾರ ಅಭಿಮಾನಿಗಳು ಇದ್ದು. ಎಲ್ಲೇ ಸ್ಪರ್ಧೆ ನಡೆದರೂ ಹೋರಿ ನೋಡಲು ಜನಸಾಗರವೇ ಬರುತ್ತಿತ್ತು.
ಮೊನ್ನೆಯಷ್ಟೇ ತನ್ನ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿತ್ತು. ಈ ವೇಳೆ ಹೋರಿ ಅಭಿಮಾನಿಗಳು ವಾಟ್ಸಪ್, ಇನ್ಸ್ಟಾಗ್ರಾಮ್ ನಲ್ಲಿ ಸ್ಟೇಟಸ್ ಹಾಕಿಕೊಂಡು ಸಂಭ್ರಮಿಸಿದ್ದರು. ಇದೀಗ ಹೋರಿ ಫೋಟೊ ಸಮೇತ 'ಮಿಸ್ ಯು' ರಾಕ್ ಸ್ಟಾರ್ ಎಂದು ಕಂಬನಿ ಮಿಡಿದಿದ್ದಾರೆ.

ಹೋರಿ ನಿಧನಕ್ಕೆ ಮಾಜಿ ಸಿಎಂ ಸಂತಾಪ
ಹಾವೇರಿ ಜಿಲ್ಲೆಯ ಶಿಗ್ಗಾವಿ ಶಾಸಕರು, ಹಾಲಿ ಹಾವೇರಿ-ಗದಗ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿಯು ಆಗಿರುವ ಪ್ರಾಣಿ ಪ್ರಿಯ ಬಸವರಾಜ ಬೊಮ್ಮಾಯಿ ಅವರು 'ಹಾವೇರಿ ರಾಕ್ ಸ್ಟಾರ್ ಹೋರಿ' ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಜನಪದವೇ ನಮ್ಮ ಜೀವಾಳ - ಸಾಂಸ್ಕೃತಿಕ ಆಚರಣೆಗಳೇ ನಮ್ಮ ಸ್ವಂತಿಕೆ.
— Basavaraj S Bommai (Modi Ka Parivar) (@BSBommai) April 7, 2024
ರಾಜ್ಯದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದ ನಮ್ಮ ಹಾವೇರಿಯ ಹೆಮ್ಮೆಯ ರಾಕ್ ಸ್ಟಾರ್ ಹೋರಿ ಇನ್ನಿಲ್ಲ ಎಂಬುದೇ ನಂಬಲಾರದ ಸಂಗತಿ.
ಹೋರಿ ಬೆದರಿಸುವ ಸ್ಪರ್ಧೆ ಎಲ್ಲಿಯೇ ಇದ್ದರೂ ಅಲ್ಲಿ ರಾಕ್ ಸ್ಟಾರ್ ಇದ್ದಾನೆಂದರೆ ಉಳಿದವರೆಲ್ಲರಿಗೂ ಸೋಲು ಖಚಿತ ಎನ್ನುವಷ್ಟರ… pic.twitter.com/C0ToQ5Vr4u
ಈ ಕುರಿತು ಟ್ವೀಟ್ ಮಾಡಿರುವ ಬಸವರಾಜ ಬೊಮ್ಮಾಯಿ ಅವರು, ಜನಪದವೇ ನಮ್ಮ ಜೀವಾಳ - ಸಾಂಸ್ಕೃತಿಕ ಆಚರಣೆಗಳೇ ನಮ್ಮ ಸ್ವಂತಿಕೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದ ನಮ್ಮ ಹಾವೇರಿಯ ಹೆಮ್ಮೆಯ ರಾಕ್ ಸ್ಟಾರ್ ಹೋರಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಮನಸ್ಸಿಗೆ ನೋವಾಗಿದೆ ಎಂದರು.
ಹೋರಿ ಬೆದರಿಸುವ ಸ್ಪರ್ಧೆ ಎಲ್ಲಿಯೇ ಇದ್ದರೂ ಅಲ್ಲಿ ರಾಕ್ ಸ್ಟಾರ್ ಇದ್ದಾನೆಂದರೆ ಉಳಿದವರೆಲ್ಲರಿಗೂ ಸೋಲು ಖಚಿತ ಎನ್ನುವಷ್ಟರ ಮಟ್ಟಿಗೆ ರಾಕ್ ಸ್ಟಾರ್ ಹೋರಿ ಜನಪ್ರಿಯವಾಗಿತ್ತು. ಅಗಲಿದ ಅಭಿಮಾನಿಗಳ ನೆಚ್ಚಿನ ರಾಕ್ ಸ್ಟಾರ್ ಗೆ ಅಂತಿಮ ನಮನಗಳು. ಮುಂದಿನ ಜನ್ಮದಲ್ಲಿ ಹೋರಿ ಹಬ್ಬದ ತವರೂರಾಗಿರುವ ಹಾವೇರಿಯಲ್ಲಿಯೇ ಮತ್ತೊಮ್ಮೆ ಹುಟ್ಟಿ ಬಾ ಎಂದು ಪ್ರಾರ್ಥಿಸಿದ್ದಾರೆ.
ಹೋರಿ ಅಂತ್ಯಕ್ರಿಯೆ
ಬಲೂನು, ಹೂಗಳಿಂದ ಸಿಂಗರಿಸಿದ ಟ್ರ್ಯಾಕ್ಟರ್‌ನಲ್ಲಿ ಹಾವೇರಿ ರಾಕ್‌ಸ್ಟಾರ್ ಹೋರಿಯನ್ನು ಕೂರಿಸಲಾಗಿದೆ. ಮೆರವಣಿಗೆ ಮೂಲಕ ಹೋರಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮಕ್ಕಳಂತೆ ಸಾಕಿದ್ದ ಈ ಹೋರಿಯ ನಿಧನದಿಂದ ಕುಟುಂಬಸ್ಥರಲ್ಲಿ ಮೌನ ಆವರಿಸಿದೆ. ಮನೆ ಖಾಲಿ ಖಾಲಿ ಎಂಬ ವಾತಾವರಣ ನಿರ್ಮಾಣವಾಗಿದೆ. ಅಭಿಮಾನಿಗಳು ರಾಕ್‌ಸ್ಟಾರ್ ಮತ್ತೆ ಹುಟ್ಟಿ ಬರಲಿ ಪ್ರಾರ್ಥಿಸಿದ್ದಾರೆ.












Click it and Unblock the Notifications