ಹಾಸನ; ಅಂಚೆ ಮತದಾರರ ಮೇಲೆ ಪಕ್ಷದ ಪರವಾಗಿ ಒತ್ತಡ, ದೂರು ದಾಖಲು
ಹಾಸನ, ಏಪ್ರಿಲ್ 30; ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಮತದಾನ ಆರಂಭವಾಗಿದೆ. 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತದಾನದ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಚುನಾವಣಾ ಕಾರ್ಯ ನಿರತ ನೌಕರರು ಹಾಗೂ ಸೇವಾ ಮತದಾರರು ಮೇ 2 ರಿಂದ 4ರ ತನಕ ಅಂಚೆ ಮತದಾನ ಮಾಡಲಿದ್ದಾರೆ. ಸಾಮಾನ್ಯ ಜನರು ಮೇ 10ರಂದು ಮತದಾನ ಮಾಡಬಹುದಾಗಿದೆ.
ಹಾಸನ ಜಿಲ್ಲೆಯಲ್ಲಿ ಅಂಚೆಮತಪತ್ರಗಳನ್ನು ಒಂದು ಪಕ್ಷದ ಪರವಾಗಿ ಚಲಾಯಿಸಲು ಒತ್ತಡ ಹಾಕಲಾಗುತ್ತಿದೆ ಎಂದು ದೂರುಗಳು ಬಂದಿವೆ. ಅಂಚೆ ಮತದಾನಕ್ಕಾಗಿ ಅಂಚೆ ಮತದಾನ ಸೆಂಟರ್ ಅನ್ನು ದಿನಾಂಕ 2/5/2023 ರಿಂದ 4/5/2023ರವರೆಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ತೆರೆಯಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಚುನಾವಣಾ ಆಯೋಗ ಸೂಚನೆ ನೀಡಿದೆ.

ಜಿಲ್ಲಾ ಚುನಾವಣಾಧಿಕಾರಿ, ಹಾಸನ ಜಿಲ್ಲಾಧಿಕಾರಿಗಳು ಚುನಾವಣಾ ಜರೂರು ಎಂದು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಇದರಲ್ಲಿ ಅಂಚೆ ಮತಪತ್ರಗಳ ಬಗ್ಗೆ ಅಕ್ರಮ ನಡೆಸಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ರನ್ವಯ ನಿಯಮಾನುಸಾರ ಸದರಿಯವರುಗಳ ವಿರುದ್ಧ ಕ್ರಿಮಿನಲ್ ಮೊಕದ್ಧಮೆ ದಾಖಲಿಸಲಾಗುವುದೆಂದು ತಿಳಿಸಲಾಗಿದೆ.
ಸುತ್ತೋಲೆಯಲ್ಲಿ ಏನಿದೆ?; ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಸಂಬಂಧ ಚುನಾವಣೆ ಕೆಲಸದಲ್ಲಿ ನಿರತರಾಗಿರುವ ಸಿಬ್ಬಂದಿ/ ಚುನಾವಣಾ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಅಂಚೆ ಮತಪತ್ರಗಳನ್ನು ನೀಡಲಾಗುತ್ತಿರುತ್ತದೆ. ಅಂಚೆ ಮತಪತ್ರಗಳನ್ನು ಒಂದು ಪಕ್ಷದ ಪರವಾಗಿ ಚಲಾಯಿಸಲು ಒತ್ತಡ ಹಾಕುತ್ತಿರುವುದಾಗಿ, ಆಮಿಷಗಳನ್ನು ಒಡ್ಡಿ ಅಂಚೆ ಮತದಾರರಿಗೆ ಅಂಚೆ ಮತಪತ್ರವನ್ನು ತಮ್ಮ ಕೈಗೆ ಕೊಡುವಂತೆ ಪ್ರಭಾವ ಬೀರುತ್ತಿರುವುದಾಗಿ ದೂರುಗಳು ಸ್ವೀಕೃತವಾಗುತ್ತಿರುತ್ತದೆ ಎಂದು ತಿಳಿಸಲಾಗಿದೆ.

ಅಂಚೆ ಮತಪತ್ರಗಳ ಚಲಾವಣೆ ಸಂಬಂಧ ದೂರುಗಳು ಸ್ವೀಕೃತವಾಗುತ್ತಿರುವ ಹಿನ್ನೆಲೆಯಲ್ಲಿ ಅಂಚೆ ಮತಪತ್ರಗಳ ಸಂಬಂಧ ಒತ್ತಡ, ಆಮಿಷಗಳನ್ನು ತರದಂತೆ ತಮ್ಮ ವ್ಯಾಪ್ತಿಯ ಹಾಗೂ ತಮ್ಮ ಅಧೀನಕ್ಕೆ ಒಳಪಡುವ ಎಲ್ಲಾ ತಾಲ್ಲೂಕು ಸಂಘಸಂಸ್ಥೆಗಳು ಹಾಗೂ ಸದಸ್ಯರಿಗೂ ಸಹ ತಿಳುವಳಿಕೆ ನೀಡಲು ತಿಳಿಸಿದೆ.
ಈ ಸಂಬಂಧ ಯಾವುದೇ ಸಿಬ್ಬಂದಿ ಅಂಚೆ ಮತಪತ್ರಗಳ ಬಗ್ಗೆ ಅಕ್ರಮ ನಡೆಸಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ರನ್ವಯ ನಿಯಮಾನುಸಾರ ಕ್ರಿಮಿನಲ್ ಮೊಕದ್ಧಮ ದಾಖಲಿಸಲಾಗುವುದೆಂದು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನೌಕರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲು ತಿಳಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಅಂಚೆ ಮತದಾನಕ್ಕೆ ಅವಕಾಶ; ಕರ್ನಾಟಕದ 2023ರ ಚುನಾವಣೆ ಹಿನ್ನಲೆಯಲ್ಲಿ ಅಗತ್ಯ ಸೇವೆಗಳು ಎಂದು ಗುರುತಿಸಲಾದ ಇಲಾಖೆಗಳ ವಿವರಗಳನ್ನು ಕರ್ನಾಟಕ ಸರ್ಕಾರದಿಂದ ಚುನಾವಣಾ ಆಯೋಗವು ಪಡೆದಿತ್ತು. ಅದರಂತೆ ಸದರಿ ಇಲಾಖೆಗಳನ್ನು ಅಗತ್ಯ ಸೇವೆಗಳ ಇಲಾಖೆಗಳು ಎಂದು ಗುರುತಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ಈ ರೀತಿ ಅಗತ್ಯ ಸೇವೆಗಳ ಇಲಾಖೆ ಎಂದು ಗುರುತಿಸಲಾದ ಇಲಾಖೆಗಳ ಅಧಿಕಾರಿ/ ಸಿಬ್ಬಂದಿಗಳಿಗೆ ಆಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶವನ್ನು ನೀಡಿದೆ. ಪೋಸ್ಟಲ್ ವೋಟಿಂಗ್ ಸೆಂಟರ್ ಅನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕ ಮಾದರಿಯಾಗಿ ಸ್ಥಾಪನೆ ಮಾಡಲಾಗಿದೆ.
ದಿನಾಂಕ 2/5/2023 ರಿಂದ 4/5/2023ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಚೆ ಮತದಾನ ಮಾಡಲು ಸೆಂಟರ್‌ಗಳನ್ನು ತೆರೆಯಲಾಗುತ್ತದೆ. ಅಲ್ಲದೇ ಅಧಿಕಾರಿ/ ಸಿಬ್ಬಂದಿಗಳು ಅಂಚೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಈಗಾಗಲೇ ಸೂಚಿಸಲಾಗಿದೆ.
12ಡಿ ನೀಡಿರುವ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಗೆ ಏ. 29, 30 ಮತ್ತು ಮೇ 1ರಂದು ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬಳಿಕ ಮೇ 2 ರಿಂದ 4ರ ತನಕ ಅಂಚೆ ಮತದಾನ ನಡೆಯಲಿದೆ. ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲಾ ಅರ್ಹ ಮತದಾರರು ಮತದಾನ ಮಾಡುವಂತೆ ಚುನಾವಣಾ ಆಯೋಗ ಕರೆ ನೀಡಿದೆ.












Click it and Unblock the Notifications