Prajwal Revanna case: ಆಕ್ಷೇಪಾರ್ಹ ವಿಡಿಯೋಗಳನ್ನು ಹರಿಬಿಟ್ಟಿದ್ದ ಇಬ್ಬರಿಗೆ 14 ದಿನಗಳ ನ್ಯಾಯಾಂಗ ಬಂಧನ
ಹಾಸನ, ಮೇ. 14 : ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳಿಗೆ ಹಾಸನದ ಸ್ಥಳೀಯ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದಲ್ಲಿ ವಿಡಿಯೋ ಹಂಚಿಕೊಂಡವರನ್ನು ಬಂಧಿಸಲಾಗುತ್ತಿದೆ.
ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಹಂಚುತ್ತಿದ್ದ ಆರೋಪದ ಮೇಲೆ ಲಿಖಿತ್ ಗೌಡ, ಯಲಗುಂದ ಚೇತನ್ ಮತ್ತು ಪ್ರಜ್ವಲ್ ಎಂಬ ಮೂವರು ಆರೋಪಿಗಳನ್ನು ಭಾನುವಾರ ಕುದುರೆಮುಖ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಹಾಸನ ನ್ಯಾಯಾಲಯ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇನ್ನು, ಇದೇ ಪ್ರಕರಣದಲ್ಲಿ ಬಿಜೆಪಿ ನಾಯಕ ಮತ್ತು ವಕೀಲ ಜಿ ದೇವರಾಜೇಗೌಡ ಅವರನ್ನು ಬಂಧಿಸಲಾಗಿದೆ.

ವಿಡಿಯೋ ಹಂಚಿಕೆ: ಐವರ ಬಂಧನ
ಸುಸ್ಪಷ್ಟ ವೀಡಿಯೋಗಳನ್ನು ಪ್ರಸಾರ ಮಾಡಿದ ಆರೋಪದಲ್ಲಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪೈಕಿ ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್ ಎಂಬಾತನನ್ನು ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಷಯ ಅಪ್‌ಲೋಡ್ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.
ಕುದುರೆಮುಖ ಪೊಲೀಸ್ ಠಾಣೆ ಪೊಲೀಸರು ಪ್ರಜ್ವಲ್ ನನ್ನು ಟ್ರೋಲ್ ಪೇಜ್ ನಿರ್ವಾಹಕ ಎಂದು ಗುರುತಿಸಿದ್ದು, ಆತನನ್ನು ಐಪಿಸಿ ಸೆಕ್ಷನ್ 67 ಮತ್ತು 67(ಎ) ಅಡಿಯಲ್ಲಿ ಬಂಧಿಸಿದ್ದಾರೆ. ಇದರ ಜೊತೆಗೆ ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರ ಆಪ್ತರಾದ ಲಿಖಿತ್ ಗೌಡ ಮತ್ತು ಚೇತನ್ ಅವರು ಈ ವೀಡಿಯೊಗಳನ್ನು ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು ಬಂಧಿತರಾಗಿದ್ದ ದೇವರಾಜೇಗೌಡರನ್ನು ಸೋಮವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಕಸ್ಟಡಿಗೆ ಕಳುಹಿಸಲಾಗಿದೆ.
ಹಾಸನ ತಾಲೂಕಿನ ಯಳಗುಂದ ಗ್ರಾಮದ ಚೇತನ್ ಅವರ ನಿವಾಸದಲ್ಲಿ ಎಸ್‌ಐಟಿ ತಂಡ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ಉಳಿದ ಆರೋಪಿ ಲಿಖಿತ್ ಗೌಡನನ್ನು ಶ್ರವಣಬೆಳಗೊಳದಲ್ಲಿರುವ ಆತನ ಮನೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.

ಜಾತ್ಯತೀತ ಜನತಾ ದಳ ಮತ್ತು ಬಿಜೆಪಿ ಮೈತ್ರಿಯ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಎಂಜಿ ಅವರು ಏಪ್ರಿಲ್ 23 ರಂದು ವೀಡಿಯೊಗಳು ನಕಲಿ ಎಂದು ಆರೋಪಿಸಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದರು. ನವೀನ್ ಗೌಡ ಸೇರಿದಂತೆ ಹಲವು ವ್ಯಕ್ತಿಗಳು ಪ್ರಜ್ವಲ್ ರೇವಣ್ಣ ಅವರ ಮಾನಹಾನಿ ಮಾಡುವ ಉದ್ದೇಶದಿಂದ ವಿಡಿಯೋ ಮತ್ತು ಚಿತ್ರಗಳನ್ನು ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
"ನವೀನ್ ಗೌಡ ಮತ್ತು ಇತರರು ಪ್ರಜ್ವಲ್ ರೇವಣ್ಣ ಅವರ ಪ್ರತಿಷ್ಠೆಗೆ ಕಳಂಕ ತರುವ ಮತ್ತು ಅವರಿಗೆ ಮತ ಹಾಕದಂತೆ ತಡೆಯುವ ಉದ್ದೇಶದಿಂದ ಹಾಸನ ಲೋಕಸಭಾ ಕ್ಷೇತ್ರದ ಮತದಾರರಿಗೆ ಪೆನ್ ಡ್ರೈವ್, ಸಿಡಿ ಮತ್ತು ವಾಟ್ಸ್‌ಆ್ಯಪ್ ಬಳಸಿ ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಂದ್ದಾರೆ" ಎಂದು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.
ಇನ್ನು, ಜೆಡಿಎಸ್‌ನ ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಆಕ್ಷೇಪಾರ್ಹ ವಿಡಿಯೋಗಳನ್ನು ಹರಿಬಿಟ್ಟಿರುವ ಆರೋಪಿಗಳನ್ನು ಬಂಧಿಸಬೇಕು ಎಂದಿದ್ದಾರೆ. ''ವಿಡಿಯೋ, ಫೋಟೋಗಳ ಪ್ರಸಾರದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ. ಬಂಧಿತರಿಬ್ಬರು ಮಾಜಿ ಶಾಸಕ (ಪ್ರೀತಂ ಗೌಡ) ಅವರ ಆಪ್ತರು ಎಂದು ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ಕೆಲವು ಹೆಚ್ಚು ಪ್ರಭಾವಿ ವ್ಯಕ್ತಿಗಳು ಇದರ ಹಿಂದೆ ಇದ್ದಾರೆ. ಎಸ್‌ಐಟಿ ಅವರನ್ನು ಪತ್ತೆ ಮಾಡಬೇಕು" ಎಂದಿದ್ದಾರೆ.












Click it and Unblock the Notifications