ಭಾರೀ ಮಳೆ ಹಿನ್ನೆಲೆ ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ
ಹಾಸನ, ಜುಲೈ, 24: ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹಾಗೆಯೇ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲೂಕುಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆರಾಯನ ಆರ್ಭಟ ಮುಂದುವರೆದ ಹಿನ್ನೆಲೆ ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಿದೆ.
37.103 ಟಿಎಂಸಿ ಗರಿಷ್ಠ ನೀರಿನ ಸಾಮರ್ಥ್ಯ ಇರುವ ಹೇಮಾವತಿ ಜಲಾಶಯದಲ್ಲಿ ಇದೀಗ 23,142 ಕ್ಯೂಸೆಕ್ ನೀರು ಒಳಹರಿವು ಇದೆ. ಗರಿಷ್ಠ 2922 ಅಡಿಗಳನ್ನು ಇರುವ ಈ ಡ್ಯಾಂನಲ್ಲಿ ಸದ್ಯ 2903.05 ಅಡಿ ನೀರು ಸಂಗ್ರಹವಾಹಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ
ಮತ್ತೊಂದೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸೋಮವಾರ (ಜುಲೈ 24) ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಉಡುಪಿ, ಧಾರವಾಡ ಸೇರಿದಂತೆ ಹಲವು ಜೆಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
* ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿ ಶಿವಮೊಗ್ಗ ಡಿಡಿಪಿಐ ಪರಮೇಶ್ವರಪ್ಪ ಆದೇಶಿಸಿದ್ದಾರೆ. ಅನುದಾನಿತ, ಅನುದಾನ ರಹಿತ ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿದೆ.
* ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶ ಹೊರಡಿಸಿದ್ದಾರೆ.
* ಉಡುಪಿ ಜಿಲ್ಲೆಯಲ್ಲೂ ಭಾರೀ ಮಳೆ ಮಳೆಯಾಗುತ್ತಿರುವ ಹಿನ್ನೆಲೆ, ಬೈಂದೂರು ತಾಲೂಕಿನ ಶಾಲಾ ಮತ್ತು ಪಿಯುಸಿ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ.
* ಧಾರವಾಡ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ಆದೇಶ ಹೊರಡಿಸಿದ್ದಾರೆ. ಹಾಗೆಯೇ ಆಗಸ್ಟ್ 5ರಂದು ಸಂಜೆವರೆಗೆ ಶಾಲೆ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ.
* ಹಾವೇರಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪದವಿ ಮತ್ತು ಐಟಿಐ ಕಾಲೇಜುಗಳು ಎಂದಿನಂತೆ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
* ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿ ಅಯಾ ತಾಲೂಕು ಅಡಳಿತ ಹಾಗೂ ಶಿಕ್ಷಣ ಇಲಾಖೆ ಆದೇಶ ಮಾಡಿದೆ.
ಮತ್ತೊಂದೆಡೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಜುಲೈ 27ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಯಾದಗಿರಿ, ಹಾಸನ, ಕಲಬರಗಿ, ಬೆಳಗಾವಿ, ಬೀದರ್, ಧಾರವಾಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications