ಬ್ರೇಕಿಂಗ್ ನ್ಯೂಸ್ ಕೊಟ್ಟ ಹಾಸನ ಸಂಸದ ಪ್ರಜ್ವಲ್ ರೇವಣ್ಣ!
ಹಾಸನ, ಜೂನ್ 17 : ಹಾಸನ ಕ್ಷೇತ್ರದ ಸಂಸದ ಮತ್ತು ಜೆಡಿಎಸ್ ಪಕ್ಷದ ಯುವ ನಾಯಕ ಪ್ರಜ್ವಲ್ ರೇವಣ್ಣ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇನ್ನು ಮುಂದೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಜನರ ಜೊತೆ ಸಂಪರ್ಕದಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ.
Recommended Video
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಎಚ್. ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದ ಸಂಸದರು. 2019ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಮೊಮ್ಮಗನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು.
ಫೇಸ್ ಬುಕ್ ಪುಟದಲ್ಲಿ ಸಕ್ರಿಯರಾಗಿರುವ ಪ್ರಜ್ವಲ್ ರೇವಣ್ಣ ಇನ್ನು ಮುಂದೆ ಟ್ವಿಟರ್‌ನಲ್ಲಿಯೂ ಸಕ್ರಿಯರಾಗಲಿದ್ದಾರೆ. ಈ ಕುರಿತು ಅವರು ಬುಧವಾರ ಟ್ವೀಟ್ ಮಾಡಿದ್ದಾರೆ. @iPrajwalRevanna ಮುಖಾಂತರ ಸಂಪರ್ಕದಲ್ಲಿರುತ್ತೇನೆ ಎಂದು ಅವರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟ್ವಿಟರ್‌ನಲ್ಲಿ ಸಕ್ರಿಯವಾಗಿರುತ್ತೇನೆ ಎಂದು ಘೋಷಣೆ ಮಾಡಿದ್ದರು. ಈಗ ಪ್ರಜ್ವಲ್ ರೇವಣ್ಣ ಸಹ ಟ್ವಿಟರ್‌ಗೆ ಬಂದಿದ್ದಾರೆ. ಪ್ರಸ್ತುತ ವಿದ್ಯಾಮಾನಗಳ ಕುರಿತು ಟ್ವೀಟ್‌ಗಳನ್ನು ಮಾಡಲಿದ್ದಾರೆ.

ಪ್ರಜ್ವಲ್ ರೇವಣ್ಣ ಟ್ವೀಟ್
"ನಮಸ್ಕಾರ ಸ್ನೇಹಿತರೆ, ನಾನು ಇನ್ನು ಮುಂದೆ ನಿಮ್ಮೆಲ್ಲರ ಜೊತೆ ಈ ಟ್ವಿಟ್ಟರ್ ಖಾತೆ @iPrajwalRevanna ಮುಖಾಂತರ ಸಂಪರ್ಕದಲ್ಲಿರುತ್ತೇನೆ. ನೆಲ, ಜಲ, ಭಾಷೆ ಹಾಗೂ ನಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಮತ್ತು ರಾಜ್ಯದ ಹಾಗು-ಹೋಗುಗಳ ಬಗ್ಗೆ ನನ್ನ ಅಭಿಪ್ರಾಯ, ನಿಲುವುಗಳನ್ನು ಇಲ್ಲಿ ವ್ಯಕ್ತಪಡಿಸಲಿದ್ದೇನೆ" ಎಂದು ಪ್ರಜ್ವಲ್ ರೇವಣ್ಣ ಟ್ವೀಟ್ ಮಾಡಿದ್ದಾರೆ.

2019ರಲ್ಲಿ ತೆರೆದ ಖಾತೆ
@iPrajwalRevanna ಎಂಬ ಖಾತೆಯನ್ನು 2019ರ ಡಿಸೆಂಬರ್‌ನಲ್ಲಿ ತೆರೆಯಲಾಗಿದೆ. ಕನ್ನಡಿಗ, ಹಾಸನ ಸಂಸದ ಎಂದು ಅದರಲ್ಲಿ ಪರಿಚಯವನ್ನು ಅವರು ಬರೆದಿದ್ದಾರೆ. ಈ ಖಾತೆಯ ಮೂಲಕವೇ ಅವರು ಇನ್ನು ಮುಂದೆ ಜನರ ಸಂಪರ್ಕದಲ್ಲಿರಲಿದ್ದಾರೆ.

14 ಜನರನ್ನು ಫಾಲೋ ಮಾಡುತ್ತಿದ್ದಾರೆ
ಪ್ರಜ್ವಲ್ ರೇವಣ್ಣ ಅವರು 14 ಜನರನ್ನು ಫಾಲೋ ಮಾಡುತ್ತಿದ್ದಾರೆ. ಪ್ರಸ್ತುತ ಅವರನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 1207. "ಭಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ಯೋಧರ ಸಾವು ನನಗೆ ಬಹಳ ನೋವುಂಟು ಮಾಡಿದೆ. ದೇಶಕ್ಕಾಗಿ ಪ್ರಾಣ ನೀಡಿದ ನಿಮಗೆ ಕೋಟಿ ನಮನಗಳು" ಎಂದು ಬುಧವಾರ ಮಧ್ಯಾಹ್ನ ಈ ಖಾತೆಯಿಂದ ಪ್ರಜ್ವಲ್ ರೇವಣ್ಣ ಟ್ವೀಟ್ ಮಾಡಿದ್ದಾರೆ.

ಎಲ್ಲರೂ ಟ್ವಿಟರ್‌ನಲ್ಲಿ ಸಕ್ರಿಯ
ಪ್ರಜ್ವಲ್ ರೇವಣ್ಣ ತಾತ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಚಿಕ್ಕಪ್ಪ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಜೆಡಿಎಸ್ ನಾಯಕರು ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ. ಈಗ ಪ್ರಜ್ವಲ್ ರೇವಣ್ಣ ಸಹ ಇನ್ನು ಮುಂದೆ ಟ್ವಿಟರ್‌ನಲ್ಲಿ ಸಿಗಲಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ.












Click it and Unblock the Notifications