ಇಂದು ಬಾಗಿಲು ತೆರೆಯಲಿದೆ ಹಾಸನಾಂಬೆ ದೇವಾಲಯ
ಹಾಸನ, ಅಕ್ಟೋಬರ್ 17 : ಹಾಸನದ ಅಧಿದೇವತೆ ಹಾಸನಾಂಬ ದೇವಾಲಯ ಬಾಗಿಲು ಇಂದು ತೆರೆಯಲಿದೆ. ಈ ವರ್ಷ 13 ದಿನಗಳ ಕಾಲ ಭಕ್ತರು ದೇವಿಯ ದರ್ಶನ ಪಡೆಯಲು ಅವಕಾಶ ಸಿಕ್ಕಿದೆ.
ಅಕ್ಟೋಬರ್ 17ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಿದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುವ ಸಾಧ್ಯತೆ ಇದ್ದು, ಸಕಲ ವ್ಯವಸ್ಥೆ ಮಾಡಲಾಗಿದೆ.
ವರ್ಷಕ್ಕೆ ಒಮ್ಮೆ ಮಾತ್ರ ಹಾಸನಾಂಬ ದೇವಾಲಯ ಬಾಗಿಲು ತೆರಯಲಾಗುತ್ತದೆ. ಈ ವರ್ಷ ಅಕ್ಟೋಬರ್ 17ರ ಗುರುವಾರ ಬಾಗಿಲು ತೆರೆಯಲಿದ್ದು, ಅಕ್ಟೋಬರ್ 29ರಂದು ಬಾಗಿಲು ಮುಚ್ಚಲಾಗುತ್ತದೆ. ಅ. 17 ಮತ್ತು 29 ಹೊರತುಪಡಿಸಿ ಉಳಿದ ಎಲ್ಲಾ ದಿನ ಭಕ್ತರು ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.

ಹಾಸನಾಂಬೆ ಜಾತ್ರೆಯ ಅಂಗವಾಗಿ ಹಾಸನ ಜಿಲ್ಲಾಡಳಿತ ಶ್ರೀ ಹಾಸನಾಂಬ ಡಾಟ್ ಕಾಮ್ ಎಂಬ ವೆಬ್ ಸೈಟ್ ಆರಂಭಿಸಿದೆ. ದೇವಾಲಯದ ಇತಿಹಾಸ, ದರ್ಶನದ ಟಿಕೆಟ್ ಲಭ್ಯತೆ, 13 ದಿನಗಳ ದರ್ಶನದ ವೇಳಾಪಟ್ಟಿ ಸೇರಿದಂತೆ ವಿವರಗಳು ವೆಬ್‌ಸೈಟ್‌ನಲ್ಲಿವೆ.
ಅಕ್ಟೋಬರ್ 17ರಂದು ದರ್ಶನ ಪಡೆಯಲು ಅವಕಾಶವಿಲ್ಲ. ಅಕ್ಟೋಬರ್ 18ರಿಂದ ಪ್ರತಿದಿನ ದೇವಿಗೆ ಪೂಜೆ, ನೈವೇದ್ಯ ಸಮಯದಾದ ಮಧ್ಯಾಹ್ನ 1 ರಿಂದ 3ಗಂಟೆಯ ತನಕ ಭಕ್ತರು ದರ್ಶನ ಪಡೆಯುವಂತಿಲ್ಲ. ಉಳಿದ ಅವಧಿಯಲ್ಲಿ ರಾತ್ರಿ 11 ಗಂಟೆ ತನಕ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.
ಅಶ್ವಯುಜ ಮಾಸದ ಹುಣ್ಣಿಯಮೆ ನಂತರದಲ್ಲಿ ಬರುವ ಮೊದಲ ಗುರುವಾರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಬಲಿಪಾಡ್ಯಮಿ ಹಬ್ಬದ ಮಾರನೇ ದಿನ ಬಾಗಿಲು ಮುಚ್ಚಲಾಗುತ್ತದೆ. ವರ್ಷದ ಉಳಿದ ಯಾವುದೇ ಸಮಯದಲ್ಲಿ ದೇವಿಯ ದರ್ಶನ ಪಡೆಯಲು ಸಾಧ್ಯವಿಲ್ಲ.
ದೇವಾಲಯದ ಬಾಗಿಲು ತೆರೆದು ಪೂಜೆ ಸಲ್ಲಿಸಿ, ದೀಪ ಹಚ್ಚಿ, ಪ್ರಸಾದವಿಟ್ಟು ಬಾಗಿಲು ಹಾಕಲಾಗುತ್ತದೆ. ಮುಂದಿನ ವರ್ಷ ಬಾಗಿಲು ತೆರೆದಾಗಲೂ ದೀಪ ಉರಿಯುತ್ತಿರುತ್ತದೆ. ಪ್ರಸಾದ ಹಳಸಿರುವುದಿಲ್ಲ.












Click it and Unblock the Notifications