ಈ ಬಾರಿ 9 ದಿನಗಳ ಕಾಲ ಹಾಸನಾಂಬೆ ದರ್ಶನ ಪಡೆಯಿರಿ
ಹಾಸನ, ಸೆಪ್ಟೆಂಬರ್ 24 : ಅಕ್ಟೋಬರ್ 12ರಿಂದ 21ರ ತನಕ ಈ ಬಾರಿ ಹಾಸನಾಂಬೆ ದೇವಾಲಯ ಬಾಗಿಲು ತೆರೆಯಲಿದೆ. 9 ದಿನಗಳ ಕಾಲ ಇಪ್ಪನಾಲ್ಕು ಗಂಟೆಯೂ ದೇವಿಯ ದರ್ಶನ ಪಡೆಯಬಹುದಾಗಿದೆ.
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. '9 ದಿನವೂ 24 ಗಂಟೆಗಳ ಕಾಲ ದೇವಿಯ ದರ್ಶನ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ದೇವಿಗೆ ಅಲಂಕಾರ ಮಾಡಲು ಹಾಗೂ ಪೂಜೆ ಸಲ್ಲಿಸಲು ಅರ್ಚಕರಿಗೆ ಒಂದು ಗಂಟೆ ಅವಕಾಶ ನೀಡಲಾಗಿದೆ' ಎಂದು ಅವರು ಹೇಳಿದ್ದಾರೆ.

ಸಂಪ್ರದಾಯದ ಪ್ರಕಾರ ಹಾಸನದ ಶಕ್ತಿದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯಲಾಗುತ್ತದೆ. ಅಶ್ವಯುಜ ಮಾಸ ಪೂರ್ಣಿಮೆ ನಂತರ ಗುರುವಾರ ಬಾಗಿಲು ತೆರೆದು, ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚಲಾಗುತ್ತದೆ.
2016ರಲ್ಲಿ 13 ದಿನಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಸಿಕ್ಕಿತ್ತು. ಈ ಬಾರಿ 9 ದಿನಗಳ ಕಾಲ ದರ್ಶನಕ್ಕೆ ಅವಕಾಶ ಸಿಗಲಿದೆ. ಕೊನೆಯ ದಿನ ಮಧ್ಯಾಹ್ನ 12 ಗಂಟೆಯ ತನಕ ಮಾತ್ರ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.
ಕೊನೆಯ ದಿನ ಸಂಪ್ರದಾಯದ ಪ್ರಕಾರ ಅರ್ಚಕರು ದೇವಿಗೆ ಪೂಜೆ ಸಲ್ಲಿಸಿ, ಗರ್ಭಗುಡಿ ಶುಚಿಗೊಳಿಸಿ ಸಂಜೆ ದೇವಾಲಯದ ಬಾಗಿಲು ಬಂದ್ ಮಾಡಲಾಗುತ್ತದೆ.
ವಿಶೇಷ ದರ್ಶನದ ಟಿಕೆಟ್ ಗೆ 300 ರೂ. ದರ ನಿಗದಿ ಮಾಡಲಾಗಿದೆ. ಭಕ್ತಾದಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ದೇವಾಲಯದ ಸುತ್ತಮುತ್ತ ಸಿಸಿಟಿವಿ ಅಳವಡಿಸಲು ನಿರ್ದೇಶನ ನೀಡಲಾಗಿದೆ.












Click it and Unblock the Notifications