ರಾಜ್ಯ ಮದ್ಯಪಾನ ಪ್ರಿಯರ ಹೋರಾಟ ಸಂಘ ಸ್ಥಾಪನೆ: ಬೇಡಿಕೆಗಳು ಏನೇನು..?
ಹಾಸನ, ಡಿಸೆಂಬರ್ 26: ಈ ಭೂಮಿ ಮೇಲೆ ಸೇವೆಗಾಗಿ, ಸ್ಥಾನಕ್ಕಾಗಿ, ಪ್ರಚಾರಕ್ಕಾಗಿ ಹತ್ತಾರು ಸಂಘ ಸಂಘಟನೆಗಳು ಹುಟ್ಟಿಕೊಂಡಿದ್ದರೆ, ಇದೀಗ ಮದ್ಯಪಾನ ಪ್ರಿಯರ ಹೋರಾಟ ಸಂಘ ಕೂಡ ಆರಂಭವಾಗಿದೆ.
ಮದ್ಯಪಾನ ಪ್ರಿಯರ ಹೋರಾಟ ಸಂಘದ ರಾಜ್ಯಾಧ್ಯಕ್ಷರಾಗಿ ಸ್ಥಾನ ಪಡೆದುಕೊಂಡಿರುವ ವೆಂಕಟೇಶ್ ಗೊರರಹಳ್ಳಿ ಸುದ್ದಿಗೋಷ್ಠಿ ನಡೆಸಿ ಮದ್ಯಪಾನ ಪ್ರಿಯರ ಹೋರಾಟ ಸಂಘದ ಉದ್ಘಾಟನೆಗೆ ಅಬಕಾರಿ ಸಚಿವರನ್ನು ಕರೆಸುವುದಾಗಿ ಹೇಳಿಕೆ ನೀಡಿದ್ದಾರೆ. ಈ ವೇಳೆ ಮಾಧ್ಯಮದವರಿಂದ ವಿರೋಧವ್ಯಕ್ತವಾದ ಪ್ರಸಂಗ ಕೂಡ ಹಾಸನದಲ್ಲಿ ನಡೆದಿದೆ.
ಮದ್ಯದಂಗಡಿ ಬೇಡ ಎನ್ನುವುದು ಒಂದೆ ಕಡೆಯಾದರೆ, ಸಂಪೂರ್ಣವಾಗಿ ಮದ್ಯವನ್ನೆ ನಿಲ್ಲಿಸಿ ಎಂದು ಅದೆಷ್ಟೋ ಮಹಿಳೆಯರು, ಪುರುಷರು ಬೆಳಗಾದರೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ನೀಡುತ್ತಿದ್ದಾರೆ. ಮದ್ಯಪಾನದಿಂದ ಇದುವರೆಗೂ ಅದೆಷ್ಟೊ ಅಪಘಾತ ನಡೆದು, ಆ ಕುಟುಂಬ ಬೀದಿಪಾಲದ ಘಟನೆ ಎಲ್ಲಾರ ಕಣ್ಣ ಮುಂದೆ ಇದೆ. ಇದಲ್ಲದೇ ಕಂಠಪೂರ್ತಿ ಕುಡಿದುಕೊಂಡು ಮನೆಗೆ ಹೋಗಿ ಜಗಳ ನಡೆಯುವ ಕಾರಣಕ್ಕೆ ನೂರಾರು ವಿಚ್ಚೇಧನಗಳು ಕೂಡ ನಡೆದಿದೆ. ಇನ್ನು ಮದ್ಯದ ಅಮಲಿನಲ್ಲಿ ಕೊಲೆಗಳು ಕೂಡ ನಡೆದಿವೆ.

ಇದು ಯಾವುದನ್ನು ಲೆಕ್ಕಿಸದೆ ಈಗ ಒಂದಿಷ್ಟು ಜನರು ಮದ್ಯಪಾನ ಪ್ರಿಯರ ಹೋರಾಟ ಸಂಘ ಉದ್ಘಾಟನೆ ಮಾಡಲು ಸಿದ್ಧರಾಗಿದ್ದಾರೆ. ಜೊತೆಗೆ ಮದ್ಯಪಾನ ಪ್ರಿಯರ ಹೋರಾಟ ಸಂಘದ ಬೇಡಿಕೆಯ ಪಟ್ಟಿ ಕೇಳಿದರೆ ದೊಡ್ಡದಾಗಿದೆ.
ಮದ್ಯಪಾನ ಪ್ರಿಯರಿಗೆ ಸರ್ಕಾರ ಯಾವುದೇ ಸವಲತ್ತು ನೀಡಿಲ್ಲ. ಹೀಗಾಗಿ ಮದ್ಯಪಾನ ಪ್ರಿಯರ ಕೌಟಂಬಿಕ ಕಲ್ಯಾಣಕ್ಕೆ ಹೋರಾಟ ಮಾಡುತ್ತೇವೆ. ಮದ್ಯ ಮಾಡುವವರಿಗೆ ವಿಮೆ ಸೌಲಭ್ಯ ಬೇಕು, ಮದ್ಯಪಾನ ಪ್ರಿಯರ ಕುಟುಂಬಕ್ಕೆ ಆರ್ಥಿಕ ಸೌಲಭ್ಯ ನೀಡಬೇಕು, ಮದ್ಯಪಾನ ನಿಗಮ ಮಂಡಳಿ ರಚಿಸುವುದಕ್ಕೆ ಹೋರಾಟ ಮಾಡುತ್ತೇವೆ. ವಸತಿ ಕೊಡಬೇಕು, ಮದ್ಯಪಾನ ಪ್ರಿಯರ ಮಕ್ಕಳಿಗೆ ವಸತಿ ನಿಲಯದಲ್ಲಿ 10% ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇಷ್ಟೇ ಅಲ್ಲದೇ ಇನ್ನೂ ಅನೇಕ ಬೇಡಿಕೆಯನ್ನು ಮದ್ಯಪಾನ ಪ್ರಿಯರ ಹೋರಾಟ ಸಂಘದ ರಾಜ್ಯಾಧ್ಯಕ್ಷರು ಸರಕಾರದ ಮುಂದೆ ಇಟ್ಟಿದ್ದಾರೆ. ಈ ಸಂಘದ ಸದಸ್ಯರಾಗಲು ಇಚ್ಚಿಸುವವರು ಮೊದಲು ಸಂಘಟಕ್ಕೆ ೨೫೦ ರೂಪಾಯಿಗಳು ಶುಲ್ಕ ಪಾವತಿಸಬೇಕು. ಈ ಸಂಘದವನ್ನು ರಿಜಿಸ್ಟರ್ ಕೂಡ ಮಾಡಿದ್ದು, ಶೀಘ್ರದಲ್ಲಿಯೇ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಿಂದ ಸಂಘದ ಉದ್ಘಾಟನೆ ಮಾಡಿಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪತ್ರಿಕಾಗೋಷ್ಠಿಯು ಒಂದು ರೀತಿ ಅನೇಕರಿಗೆ ಅಪಹಾಸ್ಯವಾಗಿ ಕಂಡರೂ, ಮದ್ಯಪಾನ ಪ್ರಿಯರ ಸಂಘಕ್ಕೆ ಅಸ್ಥಿತ್ವ ಬೇಕಾ ಎನ್ನುವುದು ಪ್ರಶ್ನೆಯಾಗಿದೆ. ಈ ಸಂಘವು ಎಷ್ಟು ಕಾಲ ಚಾಲ್ತಿಯಲ್ಲಿರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ತಿಮ್ಮೇಗೌಡ, ಮಳಲಿಗೌಡ, ಮಧು, ಸಿದ್ದೇಶ್, ಕುಮಾರ್, ರಮೇಶ್ ಇತರರು ಉಪಸ್ಥಿತರಿದ್ದರು.












Click it and Unblock the Notifications