'ಝೊಮ್ಯಾಟೋ ಬಾಯ್' ಕಂಠಸಿರಿಗೆ ಮನಸೋತ ನೆಟ್ಟಿಗರು
ಗುವಾಹಟಿ, ಆಗಸ್ಟ್ 17: ಮನೆಬಾಗಿಲಿಗೆ ಆಹಾರ ಸೇವೆ ಕಲ್ಪಿಸುವ 'ಝೊಮ್ಯಾಟೋ' ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಕೆಲವು ವಿವಾಗಳಿಂದಲೂ ಅದು ಹೊರತಾಗಿಲ್ಲ. 'ಆಹಾರಕ್ಕೆ ಧರ್ಮವಿಲ್ಲ' ಎಂಬ ಝೊಮ್ಯಾಟೋ ಹೇಳಿಕೆಗೆ ಒಂದು ವರ್ಗದಿಂದ ಪ್ರಶಂಸೆ ವ್ಯಕ್ತವಾಗಿದ್ದರೆ, ಇನ್ನೊಂದಷ್ಟು ಮಂದಿ ಆಪ್‌ಅನ್ನು ಅನ್ ಇನ್‌ಸ್ಟಾಲ್ ಮಾಡುವ ಅಭಿಯಾನ ಆರಂಭಿಸಿದ್ದರು.
ಆಹಾರ ಸರಬರಾಜು ಮಾಡುವ ಇಂತಹ ಆಪ್‌ಗಳನ್ನು ನಡೆಸುವ ಸಂಸ್ಥೆಗಳು ಮತ್ತು ಅವುಗಳ ಡೆಲಿವರಿ ಬಾಯ್‌ಗಳು ವಿವಿಧ ಕಾರಣಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಅಂಶಗಳೂ ಇರುತ್ತವೆ.
ಈಗ ಝೊಮ್ಯಾಟೋದ ಡೆಲಿವರಿ ಬಾಯ್ ಒಬ್ಬಾತನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದು ಸಕಾರಾತ್ಮಕ ಕಾರಣಕ್ಕೆ. ಗ್ರಾಹಕರೊಬ್ಬರು ಮನೆಬಾಗಿಲಿಗೆ ಆಹಾರ ತಂದ ಯುವಕನ ಪ್ರತಿಭೆಯನ್ನು ಗುರುತಿಸಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದಾರೆ. ಕೆಲವೇ ದಿನಗಳಲ್ಲಿ ಆತ ಜನಪ್ರಿಯನಾಗಿದ್ದಾನೆ.

ಪ್ರಾಂಜಿತ್ ಹಲೋಯಿ ಎಂಬ ಯುವಕ ಹಾಡಿದ 'ಗೋರಿ ತೆರಾ ಗಾವು ಬಡಾ ಪ್ಯಾರಾ' ಹಾಡನ್ನು ಚಿತ್ರೀಕರಿಸಿದ ಗ್ರಾಹಕ ಅನಿರ್ಬನ್ ಚಕ್ರವರ್ತಿ ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಈ ಪೋಸ್ಟ್ 7,550ಕ್ಕೂ ಅಧಿಕಬಾರಿ ಶೇರ್ ಆಗಿದೆ. ಸುಮಾರು ಹತ್ತು ಸಾವಿರದಷ್ಟು ಮಂದಿ ಅದನ್ನು ಮೆಚ್ಚಿಕೊಂಡಿದ್ದಾರೆ.
'ನನ್ನ ಎಲ್ಲ ಸ್ನೇಹಿತರಿಗೂ ಪ್ರಾಂಜಿತ್ ಹಲೋಯಿಯನ್ನು ಪರಿಚಯಿಸುತ್ತಿದ್ದೇನೆ (ನನ್ನ ಮನೆ ಬಾಗಿಲಿಗೆ ಆಹಾರ ಪೂರೈಸಿದ ಝೊಮ್ಯಾಟೋ ಡೆಲಿವರಿ ಬಾಯ್). ಆಪ್‌ನಲ್ಲಿ ಫುಡ್ ಆರ್ಡರ್ ಮಾಡಿದ ಸಂದರ್ಭದಲ್ಲಿ ಆತನ ಪ್ರೊಫೈಲ್‌ನಲ್ಲಿ ಒಂದು ದಿನ ಗಾಯಕನಾಗಬೇಕು ಎಂಬ ಬಯಕೆ ವ್ಯಕ್ತಪಡಿಸಿಕೊಂಡಿರುದನ್ನು ನೋಡಿದೆ. ಹೀಗಾಗಿ ಆತ ಬಂದಾಗ ಹಾಡುವಂತೆ ಮನವಿ ಮಾಡಿದೆ. ಆತ ತುಂಬಾ ಚೆನ್ನಾಗಿ ಹಾಡಿದ. ಹಾಗಾಗಿ ಈ ವಿಡಿಯೋ ಮಾಡಿದೆ. ದಯವಿಟ್ಟು ಎಲ್ಲರೂ ವಿಡಿಯೋ ನೋಡಿ ಮತ್ತು ಆತನ ಕನಸನ್ನು ನನಸಾಗುವಂತೆ ಮಾಡಲು ಸಹಕಾರ ನೀಡಿ ಎಂದು ಮನವಿ ಮಾಡುತ್ತೇನೆ' ಎಂಬುದಾಗಿ ಅನಿರ್ಬನ್ ಚಕ್ರವರ್ತಿ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದರು.
1976ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ ಚಿತ್‌ಚೋರ್'ನ ಬಹುಪ್ರಸಿದ್ಧ ಗೀತೆಯನ್ನು ಹಾಡಿದ ಪ್ರಾಂಜಿತ್ ಈಗ ಸಾಮಾಜಿಕ ಜಾಲತಾಣಗಳಲ್ಲಿ 'ಸ್ಟಾರ್' ಆಗಿದ್ದಾನೆ. ಆತನ ಗಾಯನವನ್ನು ಹೊಗಳುವ ಜತೆಗೆ, ಅದನ್ನು ಪೋಸ್ಟ್ ಮಾಡಿದ ಅನಿರ್ಬನ್ ಅವರ ಒಳ್ಳೆಯ ಗುಣವನ್ನೂ ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications