ಅಸ್ಸಾಂ ವಿಧಾನಸಭೆ ಚುನಾವಣೆ 2021: ದಿನಾಂಕ, ಕ್ಷೇತ್ರಗಳ ವಿವರ...
ಗುವಾಹಟಿ, ಫೆಬ್ರವರಿ 26: ನಾಲ್ಕು ರಾಜ್ಯಗಳು ಹಾಗೂ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಫೆ.26ರಂದು ಸುದ್ದಿಗೋಷ್ಟಿ ನಡೆಸಿದ ಸಿಇಸಿ ಸುನಿಲ್ ಅರೋರಾ ಅವರು ಅಸ್ಸಾಂ ಸೇರಿದಂತೆ ಐದು ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಿಸಿದ್ದಾರೆ.
ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27 ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ ಹಾಗೂ ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ. 126 ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಪರಿಶಿಷ್ಟ ಜಾತಿಗೆ ಎಂಟು ಹಾಗೂ ಪರಿಶಿಷ್ಟ ಪಂಗಡಕ್ಕೆ 16 ಸೀಟುಗಳನ್ನು ಮೀಸಲಿರಿಸಲಾಗಿದೆ.
ಈ ಬಾರಿ ಅಸ್ಸಾಂನಲ್ಲಿ 33,530 ಮತದಾನ ಕೇಂದ್ರಗಳು ನಿಗದಿಯಾಗಿದ್ದು, ಕಳೆದ ಬಾರಿಗಿಂತ 34.71% ಏರಿಕೆ ಮಾಡಲಾಗಿದೆ.

ಚುನಾವಣಾ ಹಂತಗಳ ವಿವರ:
1ನೇ ಹಂತ: 47 ಕ್ಷೇತ್ರಗಳಿಗೆ ಚುನಾವಣೆ. ಮಾರ್ಚ್ 2 ಅಧಿಸೂಚನೆ ಪ್ರಕಟ. ಮಾರ್ಚ್ 9ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಮಾರ್ಚ್ 10 ನಾಮಪತ್ರ ಪರಿಶೀಲನೆ, 12ನೇ ಮಾರ್ಚ್ ನಾಮಪತ್ರ ವಾಪಸ್‌ಗೆ ಕೊನೆ ದಿನ. ಮಾರ್ಚ್ 27 ಚುನಾವಣೆ.
2ನೇ ಹಂತ: 39 ಕ್ಷೇತ್ರಗಳಿಗೆ ಚುನಾವಣೆ. ಮಾರ್ಚ್ 5 ಅಧಿಸೂಚನೆ ಪ್ರಕಟ. ಮಾರ್ಚ್ 12ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಮಾರ್ಚ್ 13 ನಾಮಪತ್ರ ಪರಿಶೀಲನೆ, 17ನೇ ಮಾರ್ಚ್ ನಾಮಪತ್ರ ವಾಪಸ್‌ಗೆ ಕೊನೆ ದಿನ. ಏಪ್ರಿಲ್ 1ಕ್ಕೆ ಚುನಾವಣೆ.
3ನೇ ಹಂತ: 40 ಕ್ಷೇತ್ರಗಳಿಗೆ ಚುನಾವಣೆ. ಮಾರ್ಚ್ 12 ಅಧಿಸೂಚನೆ ಪ್ರಕಟ. ಮಾರ್ಚ್ 19ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಮಾರ್ಚ್ 20 ನಾಮಪತ್ರ ಪರಿಶೀಲನೆ, 22ನೇ ಮಾರ್ಚ್ ನಾಮಪತ್ರ ವಾಪಸ್‌ಗೆ ಕೊನೆ ದಿನ. ಏಪ್ರಿಲ್ 6ಕ್ಕೆ ಚುನಾವಣೆ.
ಅಸ್ಸಾಂ ಸಿಎಂ ಸರ್ಬಾನಂದ ಸೋನಾವಾಲ್ ಅವರು ಚುನಾವಣೆಗೆ ಸನ್ನದ್ಧವಾಗುತ್ತಿದ್ದು, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಮತ್ತೆ ಬಂದೇ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭೆಗಳಲ್ಲಿ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬರಲಿದೆ. 5 ರಾಜ್ಯಗಳಲ್ಲಿನ 824 ಕ್ಷೇತ್ರಗಳಲ್ಲಿ 18.68 ಕೋಟಿ ಮತದಾರರಿದ್ದಾರೆ. ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ 1950 ಬಳಸಲು ಸೂಚಿಸಲಾಗಿದೆ. ಮತದಾನಕ್ಕೆ 1 ಗಂಟೆ ಹೆಚ್ಚಿನ ಅವಧಿ ನೀಡಲಾಗಿದೆ ಎಂದು ಹೇಳಿದರು.












Click it and Unblock the Notifications