ಮಾತನಾಡುತ್ತಾರೆಂದು ಮಕ್ಕಳ ಬಾಯಿಗೆ ಸೆಲ್ಲೋ ಟೇಪ್ ಸುತ್ತಿದ ಶಿಕ್ಷಕಿ!
ಗುರ್ಗಾಂವ್, ಡಿಸೆಂಬರ್ 08: ಮಕ್ಕಳು ಶಾಲೆಯಲ್ಲಿ ವಿಪರೀತ ಮಾತನಾಡುತ್ತಾರೆಂಬ ಕಾರಣಕ್ಕೆ ಇಬ್ಬರು ಮಕ್ಕಳ ಬಾಯಿಗೆ ಶಿಕ್ಷಕಿಯೊಬ್ಬರು ಸೆಲ್ಲೋಟೇಪ್ ಅಂಟಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹರ್ಯಾಣದ ಗುರ್ಗಾಂವ್ ನ ಖಾಸಗೀ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಶಿಕ್ಷಕರ ವರ್ತನೆಯನ್ನು ಸಾಕಷ್ಟು ಜನ ಖಂಡಿಸಿದ್ದಾರೆ. ಸುಮಾರು ನಾಲಕರಿಂದ ಐದು ವರ್ಷ ವಯಸ್ಸಿನ ಇಬ್ಬರು ಮಕ್ಕಳ ಬಾಯಿಗೆ ಶಿಕ್ಷಕಿ ಸೆಲ್ಲೋ ಟೇಪ್ ಅಂಟಿಸಿದ್ದರು.
ಈ ಕುರಿತು ಪ್ರಶ್ನಿಸಿದ್ದಕ್ಕೆ, 'ಮಕ್ಕಳು ಅವಾಚ್ಯ ಶಬ್ದಗಳನ್ನು ಮಾತನಾಡುತ್ತಿದ್ದರು. ಅವರಿಗೆ ಬುದ್ಧಿ ಕಲಿಸಲು ಹೀಗೆ ಮಾಡಿದೆ ' ಎಂದು ಶಿಕ್ಷಕಿ ಸಮಜಾಯಿಷಿ ನೀಡಿದ್ದರು.

ಆದರೆ ತೀರಾ ಚಿಕ್ಕ ವಯಸ್ಸಿನ ಮಕ್ಕಳಾಗಿರುವುದರಿಂದ ತಿಳಿಯದೇ ಶಾಲೆಯಲ್ಲಿ ಮಾತನಾಡಿದ್ದಾರೆ, ಅವರು ಅವಾಚ್ಯ ಶಬ್ದಗಳನ್ನೇನೂ ಮಾತನಾಡಿರಲಿಲ್ಲ. ಆದರೆ ಅವರ ಬಾಯಿ ಮುಚ್ಚಿಸಿ, ಉಳಿದ ಮಕ್ಕಳಲ್ಲಿ ಭಯ ಮೂಡಿಸುವ ಸಲುವಾಗಿ ಶಿಕ್ಷಕಿ ಇಂಥ ಕೆಲಸ ಮಾಡಿದ್ದಾರೆ ಎಂದು ಶಾಲೆಯ ಕೆಲ ಸಿಬ್ಬಂದಿ ತಿಳಿಸಿದ್ದಾರೆ.
ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿ, ಶಿಕ್ಷಕಿಯನ್ನು ತಕ್ಷಣವೇ ಅಮಾನತು ಮಾಡಿದೆ.












Click it and Unblock the Notifications