Summer season: ಬಿಸಿಲಿ ಬೇಗೆಯಿಂದ ಸುಧಾರಿಸಿಕೊಳ್ಳಲು ನೆರಳು ಕಲ್ಪಿಸಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಗದಗ ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನರಿತ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್ ನೇಮಗೌಡ, ವಾಹನ ಸವಾರರಿಗೆ ಅನುಕೂಲ ಆಗುವಂತಹ ಉತ್ತಮ ಕೆಲಸವೊಂದನ್ನು ಮಾಡಿದ್ದಾರೆ.
ಗದಗ, ಮಾರ್ಚ್, 19: ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನರಿತ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್ ನೇಮಗೌಡ, ವಾಹನ ಸವಾರರಿಗೆ ಅನುಕೂಲ ಆಗುವಂತಹ ಉತ್ತಮ ಕೆಲಸವೊಂದನ್ನು ಮಾಡಿದ್ದಾರೆ. ಅವರ ಈ ಒಂದು ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ ಸಾಮಾಜಿಕ ಕಳಾಕಳಿ ಕಾರ್ಯ ಯಾವುದು ಅಂತೀರಾ ಇಲ್ಲಿದೆ ನೋಡಿ ವಿವರ.
ನೆರಳು ಕಲ್ಪಿಸಿದ ಪೊಲೀಸರು
ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್‌ನಲ್ಲಿ ಬಿಸಿಲಿನ ಬೇಗೆಯಲ್ಲಿ ಒದ್ದಾಡುವ ವಾಹನ ಸವಾರರಿಗೆ ಹಸಿರು ನರ್ಸರಿ ತಾರ್ಪಾಲಿನ್ ಹಾಕಿ ನೆರಳು ಕಲ್ಪಿಸಿಕೊಡುವ ನೂತನ ವ್ಯವಸ್ಥೆ ಮಾಡಿದ್ದು, ಇದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಟ್ರಾಫಿಕ್ ಕಿರಿಕಿರಿ ಮತ್ತು ಬಿಸಿಲಿನಿಂದ ಬೇಸತ್ತ ಜನರಿಗೆ ಇದು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳಲು ಉತ್ತಮ ವ್ಯವಸ್ಥೆಯಾಗಿದೆ. ಎಷ್ಟೇ ಟ್ರಾಫಿಕ್ ಆದರೂ ಈ ಹಸಿರು ನರ್ಸರಿ ತಾರ್ಪಾಲಿನ್ ನೆರಳಿನಲ್ಲಿ ನಿಂತು ಸುಧಾರಿಸಿಕೊಂಡ ಬಳಿಕ ವಾಹನ ಸವಾರರು ಪ್ರಯಾಣವನ್ನು ಮುಂದುವರೆಸುತ್ತಾರೆ.

ಗದಗ-ಬೆಟಗೇರಿ ನಗರಸಭೆಯ ಸಂಯೋಗದೊಂದಿಗೆ ಮುಳುಗುಂದ ನಾಕಾ ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನ ಸವಾರರು ಎದುರಿಸುವ ಬಿಸಿಲು ಬೇಗೆಯನ್ನು ನಿವಾರಿಸಲು ಹಸಿರು ನರ್ಸರಿ ತಾರ್ಪಾಲಿನ್ ಅಳವಡಿಸಲಾಗಿದೆ. ಈ ಮೂಲಕ ನೆರಳಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ವಾಹನ ಸವಾರರಿಗೆ ತುಂಬಾ ಅನುಕೂಲವಾಗಲಿದೆ ಎಂದು ಸಾಮಾಜಿಕ ಜಾಲತಾಣವಾದ ಟ್ವೀಟ್‌ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
ಪೊಲೀಸರ ಮಾನವೀಯ ಕಾರ್ಯಕ್ಕೆ ಭಾರಿ ಮೆಚ್ಚುಗೆ
ಸದ್ಯ ಪೊಲೀಸರ ಈ ಮಾನವೀಯ ಕಾರ್ಯಕ್ಕೆ ವಾಹನ ಸವಾರರು ಮತ್ತು ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಹಲವರು ಅವರ ಕಾರ್ಯ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಸುಮಾರು ವರ್ಷಗಳಿಂದ ಸಾಕಷ್ಟು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ.ಎಸ್. ನೇಮಗೌಡ ಮಾತ್ರ ಸಾರ್ವಜನಿಕರು ಬಿಸಿಲಿನಲ್ಲಿ ಬೇಯುತ್ತಿರುವುದನ್ನು ಮನಗೊಂಡು ಈ ಉತ್ತಮ ಕಾರ್ಯ ಮಾಡಿದ್ದು ನಿಜಕ್ಕೂ ಪ್ರಶಂಸನೀಯ.

ಐಷಾರಾಮಿ ಕಾರುಗಳಲ್ಲಿ ಓಡಾಡಿ ಮಜಾ ಮಾಡುವ ಅಧಿಕಾರಿಗಳ ಮಧ್ಯೆ ಇಂತಹ ಮಾನವೀಯ ಮೌಲ್ಯ ಗಳನ್ನೊಳಗೊಂಡ ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ ಎಂಬುದು ನಮಗೆ ಸಂತೋಷವನ್ನು ಉಂಟುಮಾಡಿದೆ. ಇಂತಹ ಜನಪರ ಕೆಲಸ ಮಾಡುತ್ತಿರುವ ನಮ್ಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಒಂದು ನಮನ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಕಳ್ಳತನವಾಗಿದ್ದ 295 ಮೊಬೈಲ್‌ಗಳ ಪತ್ತೆ
ಹಾಗೆಯೇ ವಿವಿಧಡೆ ಕಳ್ಳತನವಾಗಿದ್ದ ಸುಮಾರು 295 ಮೊಬೈಲ್‌ಗಳನ್ನು ಹೊಸ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವಲ್ಲಿ ಗದಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದರು. ಪತ್ತೆಹಚ್ಚಿದ ಮೊಬೈಲ್‌ಗಳನ್ನು ಪುನಃ ಆಯಾ ಮಾಲೀಕರಿಗೆ ಒಪ್ಪಿಸಿದರು. ಕಳೆದುಕೊಂಡಿದ್ದ ಮೊಬೈಲ್‌ಗಳು ಮತ್ತೆ ತಮ್ಮ ಕೈಸೇರುತ್ತಿದ್ದಂತೆಯೇ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದ್ದರು. ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ಮಾಲೀಕರು ಧನ್ಯವಾದ ತಿಳಿಸಿದ್ದರು.
12 ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ
ಜಿಲ್ಲೆಯ 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧಡೆ ಈ ಮೊಬೈಲ್‌ಗಳು ಕಳ್ಳತನವಾಗಿದ್ದವು. "ಕೇಂದ್ರ ಸರ್ಕಾರದ ಸಿ.ಇ.ಐ.ಆರ್ ಮತ್ತು ಮೋಬಿಫೈ" ಆ್ಯಪ್‌ಗಳ ಮೂಲಕ ಕ್ಷಿಪ್ರವಾಗಿ ಪತ್ತೆ ಮಾಡಲಾಯಿತು. ಪತ್ತೆಯಾದ ಮೊಬೈಲ್‌ಗಳ ಮೌಲ್ಯ ಸುಮಾರು 4,097,461 ರೂ. ಎಂದು ಅಂದಾಜು ಮಾಡಲಾಗಿದೆ.
ಸಾವಿರಾರು ರೂಪಾಯಿ ಬೆಲೆ ತೆತ್ತು ಮೊಬೈಲ್ ಖರೀದಿ ಮಾಡಿದ್ದ ಸಾರ್ವಜನಿಕರು, ಅವುಗಳ ಜೊತೆಗೆ ಮೌಲ್ಯವಾದ ದಾಖಲೆ, ದತ್ತಾಂಶಗಳನ್ನು ಕೂಡ ಕಳೆದುಕೊಂಡಿದ್ದರು. ಹಲವರು ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡುವಂತೆ ಪೊಲೀಸ್ ಠಾಣೆಗೂ ಅಲೆದಾಡಿದ್ದರು. ಕೊನೆಗೆ ಸಿಗದೇ ಇದ್ದುದರಿಂದ ಮೊಬೈಲ್‌ಗಳ ಮೇಲಿನ ಆಸೆಯನ್ನು ಕೈಬಿಟ್ಟಿದ್ದರು.
ಇತ್ತೀಚೆಗೆ ಪರಿಚಯ ಮಾಡಲಾಗಿರುವ ಕೇಂದ್ರ ಸರ್ಕಾರದ ಸಿ.ಇ.ಐ.ಆರ್ ಮತ್ತು ಮೋಬಿಫೈ ನೂತನ ತಂತ್ರಜ್ಞಾನದ ಮೂಲಕ ಅವುಗಳನ್ನು ಮತ್ತೆ ಪತ್ತೆ ಮಾಡಿದ್ದಲ್ಲದೆ ಮಾಲೀಕರಿಗೂ ಒಪ್ಪಿಸಲಾಯಿತು. ಸಾಮಾನ್ಯರು ಸೇರಿದಂತೆ ವೈದ್ಯರು, ಲಾಯರ್, ಪತ್ರಕರ್ತರು ಸಹ ಮೊಬೈಲ್ ಕಳೆದುಕೊಂಡು ಚಿಂತೆಗೀಡಾಗಿದ್ದರು.
ಸದ್ಯ ಪುನಃ ಮೊಬೈಲ್ ತಮ್ಮ ಕೈ ಸೇರಿದ್ದಕ್ಕೆ ಪೊಲೀಸರಿಗೆ ಧನ್ಯವಾದ ತಿಳಿಸಿದರು. ಖದೀಮರು ಜಾತ್ರೆ, ಸಂತೆ, ಬಸ್ ನಿಲ್ದಾಣ ಹೀಗೆ ವಿವಿಧ ಜನನಿಬಿಡ ಪ್ರದೇಶದಲ್ಲಿ ಅತೀ ಕಡಿಮೆ ಹಣಕ್ಕೆ ಅಂಗಡಿಗಳಲ್ಲಿ ಮೊಬೈಲ್‌ಗಳನ್ನು ಮಾರಿ ಪರಾರಿಯಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು.












Click it and Unblock the Notifications