ಅಯೋಧ್ಯೆ ರಾಮ ಮಂದಿರದ ಮೇಲೆ ಹಸಿರು ಬಾವುಟದ ಚಿತ್ರ ಪೋಸ್ಟ್ ಮಾಡಿದ ಯುವಕ!
ಗದಗ ಜನವರಿ 22: ಅಯೋಧ್ಯೆ ರಾಮ ಮಂದಿರದ ಮೇಲೆ ಹಸಿರು ಬಾವುಟದ ಚಿತ್ರ ನಿರ್ಮಿಸಿ ಕಿಡಿಗೇಡಿಯೊಬ್ಬ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪಜೀತಿಗೆ ಸಿಲುಕಿದ್ದಾನೆ. ಶ್ರೀರಾಮ ಮಂದಿರ ಉದ್ಘಾಟನೆಗೆ ಇಡೀ ದೇಶವೇ ಎದುರು ನೋಡುತ್ತಿದೆ. ಇದರ ನಡುವೆ ಕಿಡಿಗೇಡಿಯೊಬ್ಬ ಕಿಡಿ ಹೊತ್ತಿಸುವ ಪ್ರಯತ್ನ ಮಾಡಿದ್ದಾನೆ.
ದೇಶದ ಪ್ರತಿಯೊಬ್ಬರು ಇಂದು ಶ್ರೀ ರಾಮನ ನಾಮ ಜಪ ಮಾಡುತ್ತಿದ್ದಾರೆ. ಉಪವಾಸ, ವ್ರತ, ವಿಶೇಷ ಪೂಜೆ, ದಾನ ಹೀಗೆ ವಿವಿಧ ಕಾರ್ಯಗಳಲ್ಲಿ ತೊಡಗಿದ್ದಾರೆ. ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದಿವೆ. ಪ್ರಮುಖ ರಸ್ತೆ, ಗಲ್ಲಿ ಗಲ್ಲಿಗಳಲ್ಲೂ ಶ್ರೀರಾಮ ಚಿತ್ರವಿರುವ ಫ್ಲೆಕ್ಸ್‌ಗಳು ಹಾಗೂ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಹೀಗಿರುವಾಗ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ತಾಜುದ್ದೀನ್ ದಫೇದಾರ್ ಎಂಬಾತ ಕಿಡಿ ಹೊತ್ತಿಸುವಂತಹ ಕೆಲಸ ಮಾಡಿದ್ದಾನೆ.

ಈತ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾರಿಸಿರುವಂತೆ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಘಟನೆ ಆಕ್ರೋಶಕ್ಕೆ ಗುರಿಯಾಗಿದೆ. ಇಂದು ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಈ ನಡುವೆ ಕಳೆದ ದಿನ ಈ ಕಿಡಿಗೇಡಿತನ ನಡೆದಿದೆ.
ಹಿಂದೂಪರ ಸಂಘಟನೆಗಳ ಮುಖಂಡರು ಆಕ್ರೋಶ ಹೊರಹಾಕಿದ್ದು ತಪ್ಪಿತಸ್ತನನ್ನು ಬಂಧಿಸುವಂತೆ ಹಾಗೂ ಕೂಡಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗಜೇಂದ್ರಗಡ ಪೊಲೀಸರು ತಾಜುದ್ದೀನ್ ದಫೇದಾರ್ ಎಂಬಾತವನ್ನು ಬಂಧಿಸಿದ್ದಾರೆ. ಈ ಘಟನೆ ಬೆನ್ನಲ್ಲೆ ಪಟ್ಟದಲ್ಲಿ ಬಿಗಿವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಠಾಣೆಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ತಡರಾತ್ರಿ ತೆರಳಿ ಯುವಕನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಯುವಕನ ವಿರುದ್ಧ ದೂರು ದಾಖಲಾಗಿದ್ದು ವಿಚಾರಣೆ ಮಾಡಲಾಗುತ್ತಿದೆ.
ರಂಗೇರಿದ ಅಯೋಧ್ಯೆ
ಅಯೋಧ್ಯೆ ಇಂದು ಮನ ಸೆಳೆಯುವಂತೆ ಅಲಂಕಾರಗೊಂಡಿದೆ. ಶ್ರೀರಾಮನನ್ನು ಸ್ವಾಗತಿಸಲು ಇಡೀ ದೇಶವೇ ಕಾದು ಕುಳಿತಿದೆ. ರಾಮ ಮಂದಿರದಲ್ಲಿ ಈಗಾಗಲೇ ಹಲವು ಪೂಜೆ ಪುನಸ್ಕಾರಗಳು ಆರಂಭವಾಗಿವೆ. ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನಾ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಅಯೋಧ್ಯವನ್ನು ತಲುಪಿ ಈ ಪೂಜಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ದೇಶ ಮಾತ್ರವಲ್ಲದೆ ವಿದೇಶದಿಂದಲೂ ಈ ಸುದಿನವನ್ನು ಕಣ್ತುಂಬಿಕೊಳ್ಳಲು ಅತಿಥಿಗಳಿಗೆ ಆಹ್ವಾನಿಸಲಾಗಿದೆ. ಹೀಗಾಗಿ ಅಯೋಧ್ಯೆ ಮಾತ್ರವಲ್ಲದೆ ಪ್ರತೀ ಜಿಲ್ಲೆಗಳನ್ನೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications