ಹುಬ್ಬಳ್ಳಿಯಲ್ಲಿ ಅಕ್ಟೋಬರ್ ತನಕ ಸ್ಪೈಸ್‌ಜೆಟ್ ಹಾರಾಟವಿಲ್ಲ
ಹುಬ್ಬಳ್ಳಿ, ಮಾ. 30 : ಅಕ್ಟೋಬರ್ 2015ರ ತನಕ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ನೀಡುವುದಿಲ್ಲ ಎಂದು ಸ್ಪೈಸ್‌ಜೆಟ್ ಹೇಳಿದೆ. ಇದರಿಂದಾಗಿ ಬೆಂಗಳೂರು ಮತ್ತು ಮುಂಬೈಗೆ ತೆರಳುವ ಪ್ರಯಾಣಿಕರು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೋಗುವುದು ಅನಿವಾರ್ಯವಾಗಲಿವೆ.
ಮಾ.8ರ ಭಾನುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನ ಲ್ಯಾಂಡ್ ಆಗುವ ವೇಳೆ ಅಪಘಾತ ಸಂಭವಿಸಿತ್ತು. ಆನಂತರ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಮಾ.30ರಿಂದ ಪುನಃ ಸಂಚಾರ ಆರಂಭವಾಗಬೇಕಿತ್ತು. [ಹುಬ್ಬಳ್ಳಿಯಿಂದ ವಿಮಾನ ಹಾರಾಟ ಆರಂಭ]

ಆದರೆ, ಸ್ಪೈಸ್‌ಜೆಟ್ 2015ರ ಅಕ್ಟೋಬರ್ ತನಕ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಆರಂಭಿಸುವುದಿಲ್ಲ ಎಂದು ತಿಳಿಸಿದೆ ಎಂದು ನಿಲ್ದಾಣದ ನಿರ್ದೇಶಕ ಶಿವಾನಂದ ಬೇನಾಳ ಹೇಳಿದ್ದಾರೆ. ಹುಬ್ಬಳ್ಳಿಗೆ ಬರುತ್ತಿದ್ದ ಬೆಂಗಳೂರು ಮತ್ತು ಮುಂಬೈ ವಿಮಾನಗಳು ಬೆಳಗಾವಿಯಿಂದ ಸಂಚಾರ ನಡೆಸಲಿವೆ. [ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ]
ಮಾ.1ರಿಂದ ಹಾರಾಟ ಆರಂಭವಾಗಿತ್ತು : 2014ರ ಆಗಸ್ಟ್‌ನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆ ಸ್ಥಗಿತಗೊಂಡಿತ್ತು. ಸ್ಪೈಸ್ ಜೆಟ್ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ತನ್ನ ವಿಮಾನಯಾನ ಸೇವೆಯನ್ನು ಮಾರ್ಚ್ 1ರಿಂದ ಪುನಃ ಆರಂಭಿಸಿತ್ತು. ಮಾ.8ರಂದು ಅಪಘಾತವಾದ ಬಳಿಕ ಪುನಃ ಸೇವೆ ಸ್ಥಗಿತಗೊಂಡಿತ್ತು.
ಏರ್ ಪೆಗಾಸಸ್ ಸೇವೆ : ಏರ್ ಪೆಗಾಸಸ್ ಬೆಂಗಳೂರು-ಹುಬ್ಬಳ್ಳಿ ನಡುವೆ ವಿಮಾನ ಸೇವೆ ಆರಂಭಿಸಲು ನಿರ್ಧರಿಸಿದೆ. ಏ.10ರಿಂದ ಈ ಸೇವೆ ಆರಂಭವಾಗುವ ಸಾಧ್ಯತೆ ಇದೆ. ಆದರೆ, ಮುಂಬೈಗೆ ಪ್ರಯಾಣಿಸುವವರು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗುತ್ತದೆ.












Click it and Unblock the Notifications