ಆ.1ರಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ ಬಂದ್
ಹುಬ್ಬಳ್ಳಿ, ಜು. 16 : ಹುಬ್ಬಳ್ಳಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಕಾರ್ಯದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣ ಎರಡು ತಿಂಗಳ ಕಾಲ ಬಂದ್ ಆಗಲಿದೆ. ಆ.1ರಿಂದ ವಿಮಾನ ಹಾರಾಟ ಸ್ಥಗಿತಗೊಳಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿರ್ಧರಿಸಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ದರ್ಜೆ ವಿಮಾನ ನಿಲ್ದಾಣವಾಗಿ ಮೇಲ್ದರ್ಜೇಗೇರಿಸುವ ಕಾಮಗಾರಿ ಆರಂಭವಾಗಿದೆ. ಸದ್ಯ ನಿಲ್ದಾಣದಲ್ಲಿರುವ 4500 ಅಡಿ ಉದ್ದರ ರನ್ ವೇಯನ್ನು 7500 ಅಡಿಗೆ ವಿಸ್ತರಣೆ ಮಾಡಲಾಗುತ್ತದೆ. ಒಟ್ಟು 60 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ರನ್ ವೇ ವಿಸ್ತರಣೆ ಕಾರ್ಯದ ಹಿನ್ನಲೆಯಲ್ಲಿ ಆ.1ರಿಂದ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸುವಂತೆ ವಿಮಾನ ನಿಲ್ದಾಣಗಳ ಪ್ರಾಧಿಕಾರ ಸೂಚನೆ ನೀಡಿದೆ. ಈ ಕಾಮಗಾರಿ ಸುಮಾರು ಎರಡು ತಿಂಗಳ ಕಾಲ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಹುಬ್ಬಳ್ಳಿ-ಮುಂಬೈ-ನಾಂದೇಡ್ SpiceJet ಆರಂಭವಾಯ್ತು]
ಸ್ಪೈಸ್‌ಜೆಟ್ ಖಾಸಗಿ ವೈಮಾನಿಕ ಸಂಸ್ಥೆಯು ಹುಬ್ಬಳ್ಳಿ- ಬೆಂಗಳೂರು ಹಾಗೂ ಹುಬ್ಬಳ್ಳಿ-ಮುಂಬೈ-ದೆಹಲಿ ಮಧ್ಯೆ ನಿತ್ಯ ವಿಮಾನಯಾನ ಸೇವೆ ನೀಡುತ್ತಿದೆ. ಎರಡು ತಿಂಗಳ ಅವಧಿಗೆ ವಿಮಾನ ಹಾರಾಟವನ್ನು ಬೆಳಗಾವಿಗೆ ಸ್ಥಳಾಂತರ ಮಾಡಲು ಉದ್ದೇಶಿಸಲಾಗಿದೆ.
ರನ್ ವೇ ವಿಸ್ತರಣೆ ಕಾರ್ಯ ನಡೆಯುತ್ತಿದ್ದರೂ ಹೆಲಿಕಾಪ್ಟರ್ ಮತ್ತು 4-6 ಸೀಟಿನ ಲಘುವಿಮಾನ ಇಳಿಯಲು ಯಾವುದೇ ತೊಂದರೆ ಇಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಕೆ.ಎಂ.ಬಸವರಾಜು ಹೇಳಿದ್ದಾರೆ. ಆದರೆ, ಇದಕ್ಕಾಗಿ ಮೂರು ದಿನನ ಮುಂಚಿತವಾಗಿ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications