ಬಿಆರ್‌ಟಿಎಸ್ ನಿರ್ವಹಣೆ ವೈಫಲ್ಯ: ಧಾರವಾಡದ ಚಿಗರಿ ಬಸ್ಸಿನಲ್ಲಿ ಜಿರಳೆ ಸವಾರಿ
ಹುಬ್ಬಳ್ಳಿ, ಜುಲೈ 20: ಬಿ.ಆರ್.ಟಿ.ಎಸ್ ಸಾರಿಗೆ ವ್ಯಾಪ್ತಿಯ ಚಿಗರಿ ಬಸ್‌ಅನ್ನು ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ಅನಕೂಲವಾಗಲಿ ಎಂದು ಸಿದ್ಧಪಡಿಸಲಾಗಿತ್ತು. ಸುಮಾರು 970 ಕೋಟಿ ವೆಚ್ಚದಲ್ಲಿ ರೆಡಿಯಾಗಿದ್ದ ಸಂಪೂರ್ಣ ಹವಾ ನಿಯಂತ್ರಿತ ಬಿ.ಆರ್.ಟಿ.ಎಸ್ ಬಸ್‌ನಲ್ಲಿ ಇದೀಗ ಪದೇ ಪದೇ ಅವಘಡಗಳಾಗುತ್ತಿವೆ.
ಇನ್ನು ಇತ್ತೀಚಿಗೆ ಹವಾನಿಯಂತ್ರಿತ ಬಿ.ಆರ್.ಟಿ.ಎಸ್ ಬಸ್‌ನಲ್ಲಿ ಜಿರಳೆಯೂ ಕಾಣಿಸಿಕೊಂಡಿದೆ. ಪ್ರಯಾಣಿಕರ ಅನಕೂಲಕ್ಕಾಗಿ ನಿರ್ಮಿಸಿದ ಹೈಟೆಕ್ ಬಸ್ ಇದೀಗ ಒಂದಲ್ಲಾ ಒಂದು ಅವಾಂತರ ಸೃಷ್ಟಿಸುತ್ತಿವೆ. ಹೀಗಾಗಿ ಪ್ರಯಾಣಿಕರು ಹೈಟೆಕ್ ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ.

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಪ್ರಯಾಣಿಕರ ಅನಕೂಲಕ್ಕಾಗಿ ರೆಡಿಯಾಗಿರುವ ಹೈಟೆಕ್ ಚಿಗರಿ ಬಸ್‌ನಲ್ಲಿ ಇದೀಗ ಜಿರಳೆ ಸವಾರಿ ಮಾಡುತ್ತಿವೆ. ಜಿರಳೆ ಸವಾರಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿ.ಆರ್.ಟಿ.ಎಸ್ ಸಾರಿಗೆ ವ್ಯಾಪ್ತಿಯ ಚಿಗರಿ ಬಸ್ ಹುಬ್ಬಳ್ಳಿ ಧಾರಾವಾಡ ಅವಳಿ ನಗರದಲ್ಲಿ ಸಂಚರಿಸುತ್ತವೆ. ಮೂರು ವರ್ಷಗಳ ಹಿಂದೆ ಆರಂಭವಾದ ಚಿಗರಿ ಬಸ್‌ನಲ್ಲಿ ಇದೀಗ ಪದೇ ಪದೇ ಅವಘಡಗಳು ಸಂಭವಿಸುತ್ತಿವೆ. ಅದರಲ್ಲೂ ಹವಾ ನಿಯಂತ್ರಿತ ಬಸ್‌ನಲ್ಲಿ ಜಿರಳೆ ಕಾಣಿಸಿಕೊಂಡಿದ್ದು, ಚಿಗರಿ ಬಸ್ ಹೇಗೆ ಮೆಂಟೆನ್ ಮಾಡುತ್ತಾರೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರಯಾಣಿಕರ ಆಕ್ರೋಶ ಹೊರಹಾಕಿದ್ದಾರೆ.
ಚಿಗರಿ ಬಸ್ ಇದು ಕೇವಲ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಸಂಚರಿಸುವ ಹೈಟೆಕ್ ಬಸ್. ಅವಳಿ ನಗರದಲ್ಲಿ ದಿನವೊಂದಕ್ಕೆ ಸುಮಾರು 90 ಬಸ್‌ಗಳು ಓಡಾಡುತ್ತಿವೆ. ಮೂರು ವರ್ಷಗಳ ಹಿಂದೆ ಕಾರಿಡಾರ್‌ಗೆ ವೆಂಕಯ್ಯ ನಾಯ್ಡು ಚಾಲನೆ ನೀಡಿದ್ದರು. ಇನ್ನು ಅವಳಿ ನಗರದಲ್ಲಿ ಒಟ್ಟು 12 ಬಸ್ ನಿಲ್ದಾಣಗಳಿವೆ. ಚಿಗರಿ ಬಸ್ ಸಂಪೂರ್ಣವಾಗಿ ಹೈಟೆಕ್ ಆಗಿದ್ದರೂ, ಸಿಬ್ಬಂದಿ ಸರಿಯಾಗಿ ಬಸ್‌ಅನ್ನು ಸ್ವಚ್ಛವಾಗಿ ಹಾಗೂ ಸರಿಯಾಗಿ ಇಟ್ಟುಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಚಿಗರಿ ಬಸ್ ಕಳೆದ ಹದಿನೈದು ದಿನಗಳಲ್ಲಿ ಮೂರು ಕಡೆ ಅಪಘಾತವಾಗಿದೆ.

ಹುಬ್ಬಳ್ಳಿ ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ ಬ್ರೇಕ್ ಫೇಲ್ ಆಗಿ, ಮತ್ತೊಂದು ಚಿಗರಿ ಬಸ್‌ಗೆ ಡಿಕ್ಕಿಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಧಾರವಾಡದಲ್ಲಿ ಚಿಗರಿ ಬಸ್ ಅಪಘಾತವಾಗಿತ್ತು. ಪದೇ ಪದೇ ಬಸ್ ಸರಿಯಾದ ನಿರ್ವಹಣೆ ಇಲ್ಲದೆ ಬ್ರೇಕ್ ಫೇಲ್ ಆಗಿ ಅಪಘಾತಗಳಾಗುತ್ತಿದೆ.
ಮೊದಲೇ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ಚಿಗರಿ ಬಸ್ ಹತ್ತುವುದೇ ಕಡಿಮೆಯಾಗಿದೆ. ಬಿ.ಆರ್.ಟಿ.ಎಸ್ ಈಗಾಗಲೇ ತಿಂಗಳಿಗೆ ಕನಿಷ್ಟ 4 ಕೋಟಿ ನಷ್ಟದಲ್ಲಿದೆ. ಇದೀಗ ಪದೇ ಪದೇ ಅವಘಡಗಳು ಸಂಭವಿಸುವ ಹಿನ್ನಲೆಯಲ್ಲಿ ಉಳಿದ ಪ್ರಯಾಣಿಕರೂ ಕೂಡ ಚಿಗರಿ ಬಸ್ ಹತ್ತುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಂಸ್ಥೆ ತೀರಾ ನಷ್ಟಕ್ಕೆ ನಿಲುಕುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕಿದ್ದು, ಚಿಗರಿ ಬಸ್ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ.












Click it and Unblock the Notifications