ಮೇಕ್ ಮೈ ಟ್ರಿಪ್ ಹಾಗೂ ಓಯೋಗೆ 11 ಲಕ್ಷ ರೂ. ದಂಡ!

ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿಗೆ 11 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶ ನೀಡಿದೆ.

ಧಾರವಾಡ, ಫೆಬ್ರವರಿ 15; ಗ್ರಾಹಕರಿಗೆ ರೂಂ ನೀಡಲು ನಿರಾಕರಿಸಿದ್ದ ಮೇಕ್ ಮೈ ಟ್ರಿಪ್ ಮತ್ತು ಓಯೋ ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ 11 ಲಕ್ಷ ರೂ. ದಂಡ ವಿಧಿಸಿದೆ.

ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಒಟ್ಟು 5 ದೂರುಗಳು ಸಲ್ಲಿಕೆಯಾಗಿದ್ದವು. ದೂರಿನ ವಿಚಾರಣೆ ನಡೆಸಿದ ಆಯೋಗ ಒಟ್ಟು ರೂ. 11,38,000 ದಂಡ ಹಾಕಿದ್ದು, ಒಂದು ತಿಂಗಳಿನಲ್ಲಿ ದೂರುದಾರರಿಗೆ ಪರಿಹಾರ ಸಂದಾಯ ಮಾಡುವಂತೆ ತೀರ್ಪು ನೀಡಿದೆ.

ಸೇವಾ ನ್ಯೂನ್ಯತೆಗಾಗಿ ಗ್ರಾಹಕರ ಹಿತರಕ್ಷಣಾ ಕಾಯ್ದೆಯಡಿ ತಪ್ಪು ಎಸಗಿದ್ದಾರೆಂದು ಆಯೋಗ ತೀರ್ಪು ನೀಡಿದೆ. ರೂಂ ಖಾಲಿ ಇಲ್ಲ ಎಂದು ಗ್ರಾಹಕರು ವಾಹನದಲ್ಲಿಯೇ ರಾತ್ರಿ ಕಳೆಯುವಂತೆ ಮಾಡಿದ ಕಾರಣಕ್ಕೆ ದಂಡ ಪಾವತಿ ಮಾಡಬೇಕಿದೆ.

11 Lakh Fine For Make My Trip And Oyo From Dharwad District Consumer Forum

ಘಟನೆಯ ವಿವರ; ವಿದ್ಯಾನಗರ ಹುಬ್ಬಳ್ಳಿಯ ನಿವಾಸಿ ದೀಪಕ್ ರತನ್ ಮತ್ತು ಆತನ ಸ್ನೇಹಿತರು ಸೇರಿ ಒಟ್ಟು 21 ಜನರು 2019ರ ಡಿಸೆಂಬರ್‌ನಲ್ಲಿ ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಮೂಲಕ ಆನ್‍ಲೈನ್ ಮೂಲಕ ನೋಂದಣಿ ಮಾಡಿಸಿ ಮಹಾರಾಷ್ಟ್ರ ರಾಜ್ಯದ ಮುಂಬೈ, ಲೋನಾವಾಲಾ, ಲಾವಾಸಾ ಮತ್ತು ಇತರೆ ಕಡೆ ಪ್ರವಾಸ ಹೋಗಿದ್ದರು.

23/12/2019 ರಿಂದ 25/12/2019ರ ಎರಡು ದಿವಸಕ್ಕೆ ಅವರು ಲಾವಾಸಾದ ಹೋಟೆಲ್ ಅನಂತ ರೆಸಿಡೆನ್ಸಿಯಲ್ಲಿ 17,752 ರೂ. ಗಳನ್ನು ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಮೂಲಕ ಹಣ ಸಂದಾಯ ಮಾಡಿ ತಮ್ಮ ವಾಸ್ತವ್ಯಕ್ಕೆ ಒಟ್ಟು 8 ರೂಂ ಬುಕ್ ಮಾಡಿದ್ದರು.

ಎಲ್ಲಾ 21 ಜನ ದೂರುದಾರರು 23/12/2019ರಂದು ಲಾವಾಸಾಕ್ಕೆ ಬಂದು ತಮ್ಮ ವಾಸ್ತವ್ಯಕ್ಕೆ ಹೋಟೆಲ್ ಅನಂತ ರೆಸಿಡೆನ್ಸಿಯಲ್ಲಿ ವಿಚಾರಿಸಿದಾಗ ಅದರ ಮ್ಯಾನೇಜರ್ ರೂಂಗಳು ಖಾಲಿ ಇಲ್ಲ ಎಂದು ಹೇಳಿದ್ದರು. ಮೊದಲೇ ಬುಕ್ ಮಾಡಿದ್ದರೂ ರೂಂ ಕೊಡಲು ನಿರಾಕರಿಸಿದ್ದರು.

11 Lakh Fine For Make My Trip And Oyo From Dharwad District Consumer Forum

ಐವರು ಹೆಣ್ಣು ಮಕ್ಕಳು, 11 ಜನ ಚಿಕ್ಕ ಮಕ್ಕಳು ಸೇರಿ21 ಜನ ದೂರುದಾರರು ಹೋಟೆಲ್ ಆವರಣದಲ್ಲಿ ತಮ್ಮ ವಾಹನದಲ್ಲೇ ರಾತ್ರಿ ಕಳೆದಿದ್ದರು. ಮರುದಿನ ಅದೇ ಊರಿನ ಬೇರೆ ಹೋಟೆಲ್‍ಗೆ ಹೋಗಿ ಅಲ್ಲಿ 37,628 ಹಣ ನೀಡಿ ರೂಂಗಳನ್ನು ಪಡೆದುಕೊಂಡಿದ್ದರು.

ಗ್ರಾಹಕರ ಆಯೋಗಕ್ಕೆ ದೂರು; ಮೊದಲೇ ಆನ್‌ಲೈನ್ ಮೂಲಕ ಬುಕ್ ಮಾಡಿ, ಮುಂಗಡ ಹಣ ನೀಡಿದರೂ ಅನಂತ ರೆಸಿಡೆನ್ಸಿ ಅವರು 8 ರೂಂಗಳನ್ನು ನೀಡದೆ ಡಿಸೆಂಬರ್ ಚಳಿಯಲ್ಲಿ ವಾಹನದಲ್ಲಿ ಇರುವಂತೆ ಮಾಡಿದ್ದಾರೆ. ಹೋಟೆಲ್‌ನವರು ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಒಟ್ಟು 5 ದೂರುಗಳನ್ನು ಸಲ್ಲಿಕೆ ಮಾಡಿದ್ದರು.

ಈ ದೂರಿನಲ್ಲಿ ಮೇಕ್ ಮೈ ಟ್ರಿಪ್, ಓಯೋ ಕಂಪನಿ ಹಾಗೂ ಅನಂತ ರೆಸಿಡೆನ್ಸಿ ಅವರನ್ನು ಉಲ್ಲೇಖಿಸಲಾಗಿತ್ತು. ಎಲ್ಲಾ ದೂರುಗಳ ವಿಚಾರಣೆಯನ್ನು ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ. ಎ. ಬೋಳಶೆಟ್ಟಿ ಮತ್ತು ಪಿ. ಸಿ. ಹಿರೇಮಠ ನಡೆಸಿದರು.

ದೂರುದಾರರು ತಮ್ಮ ವಿರಾಮದ ವೇಳೆಯಲ್ಲಿ ಪ್ರವಾಸಿ ತಾಣಗಳನ್ನು ನೋಡಲು ಹೋದಾಗ ಅವರು ತಮ್ಮ ವಾಸ್ತವ್ಯಕ್ಕೆ ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಮೂಲಕ 17,752 ರೂ. ಮುಂಗಡ ಹಣ ನೀಡಿ ಅನಂತ ರೆಸಿಡೆನ್ಸಿ ಹೋಟೆಲ್‍ನಲ್ಲಿ ರೂಂಗಳನ್ನು ಕಾಯ್ದಿರಿಸಿದ್ದರು.

ನಿಗದಿತ ದಿನ ರೂಂ ಕೇಳಲು ಹೋದ ದೂರುದಾರರಿಗೆ ರೂಂಗಳು ಇಲ್ಲ ಎಂದು ಹೇಳಿ ಅವುಗಳನ್ನು ನೀಡದೆ ಡಿಸೆಂಬರ್ ಚಳಿಯಲ್ಲಿ ಹೋಟೆಲ್ ಆವರಣದಲ್ಲಿ ಮಹಿಳೆಯರು, ಚಿಕ್ಕಮಕ್ಕಳು ವಾಹನದಲ್ಲಿ ವಾಸ್ತವ್ಯ ಹೂಡುವಂತೆ ಮಾಡಿರುವುದು ಅನಾನುಕೂಲ, ಹಣಕಾಸಿನ ಹಾಗೂ ಮಾನಸಿಕ ಮತ್ತು ದೈಹಿಕ ತೊಂದರೆಯಾಗಿದೆ. ಹೋಟೆಲ್‍ನವರು ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಎಂದು ಆಯೋಗ ತೀರ್ಪು ನೀಡಿದೆ.

ಅನಂತ ರೆಸಿಡೆನ್ಸಿ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಲು ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿಯವರು 1,820 ರೂ. ಹಣವನ್ನು ಸರ್ವಿಸ್ ಫೀ ಎಂದು ಪಡೆದಿದ್ದು ಉಳಿದ ಹಣ ಅನಂತ ರೆಸೆಡೆನ್ಸಿಯವರಿಗೆ ದೂರುದಾರರಿಂದ ಹೋಗಿದೆ. ಆದ್ದರಿಂದ ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಸೇರಿ ಎಲ್ಲರಿಂದಲೂ ಸೇವಾ ನ್ಯೂನ್ಯತೆಯಾಗಿದ್ದು ಇದು ಗ್ರಾಹಕರ ಹಿತರಕ್ಷಣಾ ಕಾಯ್ದೆಯಡಿ ತಪ್ಪು ಎಂದು ಹೇಳಿ 21 ಜನ ದೂರುದಾರರಿಗೆ ಪರಿಹಾರ ಕೊಡಲು ಆಯೋಗ ತೀರ್ಪು ನೀಡಿದೆ.

ಮೆಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಹಾಗೂ ಅನಂತ ರೆಸಿಡೆನ್ಸಿ ಹೋಟೆಲ್‍ನವರು ಸೇರಿ ಬೇರೆ ಹೋಟೆಲ್‌ನಲ್ಲಿ ರೂಂ ಪಡೆದಿದ್ದ ಚಾರ್ಜ್ 38,000 ರೂ., 21 ಜನ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ತಲಾ 50,000 ರೂ. ಒಟ್ಟು 10,50,000 ಹಾಗೂ 5 ಪ್ರಕರಣಗಳ ಖರ್ಚು ವೆಚ್ಚ 50,000 ಸೇರಿ ಒಟ್ಟು ರೂ. 11,38,000 ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ಒಂದು ತಿಂಗಳ ಒಳಗಾಗಿ ಪರಿಹಾರವನ್ನು ದೂರುದಾರರಿಗೆ ನೀಡಲು ಆದೇಶಿಸಲಾಗಿದೆ. ತಪ್ಪಿದ್ದಲ್ಲಿ ಒಟ್ಟು ರೂ.11,38,000 ಗಳ ಮೇಲೆ ವಾರ್ಷಿಕ ಶೇ 8ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಸಂದಾಯ ಮಾಡುವಂತೆಯೂ ಆಯೋಗ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+