ಯಡಿಯೂರಪ್ಪ ಆಡಿಯೋ ನಕಲಿ ಆಗಿರುವ ಸಾಧ್ಯತೆ ಹೆಚ್ಚಿದೆ: ಶ್ರೀರಾಮುಲು
ದಾವಣಗೆರೆ, ನವೆಂಬರ್ 3: "ಯಡಿಯೂರಪ್ಪ ಅವರದು ಎಂದು ಹೇಳಲಾಗುವ ಆಡಿಯೋ ನಕಲಿ ಆಗಿರುವ ಸಾಧ್ಯತೆ ಹೆಚ್ಚಿದೆ" ಎಂದು ಸಚಿವ ಬಿ. ಶ್ರೀರಾಮುಲು ಭಾನುವಾರ ದಾವಣಗೆರೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, ಯಾರೋ ಈ ಅಡಿಯೋ ಸೃಷ್ಟಿಸಿ, ಯಡಿಯೂರಪ್ಪನವರದ್ದು ಎಂದು ಹರಿ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈಗಾಗಲೇ ಆಡಿಯೋ ಬಗ್ಗೆ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ನನ್ನ ವೈಯಕ್ತಿಕ ಅಭಿಪ್ರಾಯ ಅಂದರೆ, ಇದೊಂದು ನಕಲಿ ಆಡಿಯೋ ಆಗಿರಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಯಡಿಯೂರಪ್ಪ ಅವರ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಫ್ಟ್ ಕಾರ್ನರ್ ತೋರಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇತ್ತೀಚೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಬಗ್ಗೆ ಉತ್ತಮ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್-ಬಿಜೆಪಿ ಎರಡು ಪಕ್ಷಗಳ ಜೊತೆ ಸರ್ಕಾರ ಮಾಡಿದ್ದಾರೆ. ಈ ವೇಳೆ ಬಿಜೆಪಿ ಜೊತೆ ಸರ್ಕಾರ ಮಾಡಿದ್ದು ಅವರಿಗೆ ಒಳ್ಳೆಯದು ಅನಿಸಿರಬಹುದು. ಹೀಗಾಗಿ ಬಿಜೆಪಿ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಿದ್ದಾರೆ ಎಂದಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಯಾವುದೇ ಸಂಕಷ್ಟ ಇಲ್ಲ. ಅವಧಿ ಪೂರ್ಣಗೊಳಿಸುತ್ತೇವೆ. ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.












Click it and Unblock the Notifications