Vande Bharat Express; ಬೆಂಗಳೂರು-ದಾವಣಗೆರೆ ವೇಳಾಪಟ್ಟಿ, ದರದ ವಿವರ
ದಾವಣಗೆರೆ, ಜೂನ್ 27: ಮಂಗಳವಾರ ಕರ್ನಾಟಕದಲ್ಲಿ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಆರಂಭವಾಗಿದೆ. ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ಭಾರತೀಯ ರೈಲ್ವೆಯ ಸೆಮಿ ಹೈ-ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದಾವಣಗೆರೆಯ ಮೂಲಕ ಸಾಗುತ್ತದೆ. ರೈಲಿಗೆ ದಾವಣಗೆರೆಯಲ್ಲಿ 2 ನಿಮಿಷಗಳ ನಿಲುಗಡೆ ನೀಡಲಾಗಿದೆ. ಈ ಮೂಲಕ ಬೆಣ್ಣೆ ನಗರಿಗೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ. ಇಂದು ಧಾರವಾಡದಿಂದ ಹೊರಡುವ ರೈಲು ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ದಾವಣಗೆರೆ ರೈಲು ನಿಲ್ದಾಣದಲ್ಲಿ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಂಗಳವಾರ ಹೊರತುಪಡಿಸಿ ವಾರದ ಉಳಿದ ದಿನ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಿಂದ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ದಾವಣಗೆರೆ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳಲ್ಲಿ ಮೂರು ನಿಲುಗಡೆ ಹೊಂದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರಿನಲ್ಲಿ ನಿಲುಗಡೆ ಬೇಕು ಎಂಬ ಬೇಡಿಕೆಯೂ ಇದೆ. ಆದರೆ ಈ ಕುರಿತು ರೈಲ್ವೆ ಇಲಾಖೆಯಿಂದ ಅಧಿಕೃತ ಆದೇಶ ಇನ್ನೂ ಬಂದಿಲ್ಲ.
ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ದಾವಣಗೆರೆಯಲ್ಲಿ 2 ನಿಮಿಷ ಮತ್ತು ಹುಬ್ಬಳ್ಳಿಯಲ್ಲಿ 5 ನಿಮಿಷ ನಿಲುಗಡೆ ಹೊಂದಿದೆ. ಈ ರೈಲಿನಿಂದ ಬೆಂಗಳೂರಿನಿಂದ ದಾವಣಗೆರೆಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೆಂಗಳೂರು-ದಾವಣಗೆರೆ ನಡುವೆ ನೂರಾರು ಸರ್ಕಾರಿ ಬಸ್‌ಗಳ ಸಂಚಾರವೂ ಇದೆ.
ವೇಳಾಪಟ್ಟಿ; ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಕೆಎಸ್ಆರ್ ನಿಲ್ದಾಣದಿಂದ ಎಲ್ಲಾ ದಿನ (ಮಂಗಳವಾರ ಹೊರತುಪಡಿಸಿ) ಬೆಳಗ್ಗೆ 5.45ಕ್ಕೆ ಹೊರಡಲಿದೆ. ದಾವಣಗೆರೆಗೆ 9.58ಕ್ಕೆ ತಲುಪಲಿದೆ. ಬಳಿಕ ಹುಬ್ಬಳ್ಳಿ, ಧಾರವಾಡ ಕಡೆಗೆ ಸಾಗಲಿದೆ. ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಡುವ ರೈಲು 1.35ಕ್ಕೆ ಹುಬ್ಬಳ್ಳಿ, 3.48ಕ್ಕೆ ದಾವಣಗೆರೆಗೆ ಬರಲಿದೆ.
ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವೆ ರೈಲು ನಂಬರ್ 20661 ಸಂಚಾರ ನಡೆಸಲಿದೆ. ಈ ರೈಲಿನಲ್ಲಿ ಕೆಎಸ್ಆರ್ ಬೆಂಗಳೂರು-ದಾವಣಗೆರೆ ನಡುವಿನ ಪ್ರಯಾಣ ದರ ಎಸಿ ಚೇರ್ ಕಾರ್ 915 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ 1740 ರೂ.ಗಳು. ಯಶವಂತಪುರ-ದಾವಣಗೆರೆ ನಡುವಿನ ದರ ಎಸಿ ಚೇರ್ ಕಾರ್ 900 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ 1710 ರೂ.ಗಳು.
ದಾವಣಗೆರೆ-ಎಸ್ಎಸ್‌ಎಸ್ ಹುಬ್ಬಳ್ಳಿ ನಡುವಿನ ದರ ಎಸಿ ಚೇರ್ ಕಾರ್ 500 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ 985 ರೂ.ಗಳು. ದಾವಣಗೆರೆ-ಧಾರವಾಡ ನಡುವಿನ ಎಸಿ ಚೇರ್ ಕಾರ್ ದರ 535 ರೂ.ಗಳು ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ ದರಗಳು 1055 ರೂ.ಗಳು.
ಧಾರವಾಡ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ರೈಲು ನಂಬರ್ 20662 ಸಂಚಾರ ನಡೆಸುತ್ತದೆ. ಈ ರೈಲಿನಲ್ಲಿ ದಾವಣಗೆರೆ-ಕೆಎಸ್ಆರ್ ಬೆಂಗಳೂರು ನಡುವಿನ ದರ ಎಸಿ ಚೇರ್ ಕಾರ್ 860 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ 1690 ರೂ.ಗಳು.
ದಾವಣಗೆರೆ-ಯಶವಂತಪುರ ನಡುವಿನ ದರ ಎಸಿ ಚೇರ್ ಕಾರ್ 845 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ 1660 ರೂ.ಗಳು. ಎಸ್‌ಎಸ್‌ಎಸ್ ಹುಬ್ಬಳ್ಳಿ-ದಾವಣಗೆರೆ ನಡುವಿನ ದರ ಎಸಿ ಚೇರ್ ಕಾರ್ 705 ರೂ.ಗಳು. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ 1215 ರೂ.ಗಳು. ಧಾರವಾಡ-ದಾವಣಗೆರೆ ನಡುವಿನ ದರ ಎಸಿ ಚೇರ್ ಕಾರ್ 745 ರೂ.ಗಳು. ಎಕ್ಸಿಕ್ಯುಟಿವ್ ಕ್ಲಾಸ್ 1282 ರೂ.ಗಳು.












Click it and Unblock the Notifications