ಟ್ಯಾಬ್ ಹಂಚಿ ಹೊಳಿಗೆ ಊಟ ಹಾಕಿಸಿದ ಶಾಸಕ ರೇಣುಕಾಚಾರ್ಯ
ದಾವಣಗೆರೆ, ಜುಲೈ 05; ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ಹಂಚಿಕೆ ಮಾಡಿದರು. ಶಾಸಕರ ಜೊತೆ ಸೆಲ್ಫಿ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಮುಗಿಬಿದ್ದರು.
ಸೋಮವಾರ ಹೊನ್ನಾಳಿ ನಗರದ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ 375 ಟ್ಯಾಬ್‌ಗಳನ್ನು ವಿತರಣೆ ಮಾಡಲಾಯಿತು. ರೇಣುಕಾಚಾರ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟ್ಯಾಬ್ ಪಡೆದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಕಾಲೇಜಿನ ಸಿಬ್ಬಂದಿಗಳಿಗೆ ಶಾಸಕರು ವೈಯಕ್ತಿಕವಾಗಿ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಹೋಳಿಗೆ ಊಟವನ್ನು ಶಾಸಕರು ಬಡಿಸಿ, ತಾವು ಸಹ ವಿದ್ಯಾರ್ಥಿಗಳ ಜೊತೆ ಊಟ ಮಾಡಿದರು.

ಎಂ. ಪಿ. ರೇಣುಕಾಚಾರ್ಯ ಪತ್ನಿ ಸುಮಿತ್ರಾ ಸಹ ವಿದ್ಯಾರ್ಥಿಗಳ ಜೊತೆ ಭೋಜನ ಸವಿದರು. ಈ ಸಂದರ್ಭದಲ್ಲಿ ರೇಣುಕಾಚಾರ್ಯ ದಂಪತಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ವಿದ್ಯಾರ್ಥಿನಿಯರು ಮುಗಿಬಿದ್ದರು. ಕೈಯಲ್ಲಿ ಊಟದ ತಟ್ಟೆ ಹಿಡಿದೇ ರೇಣುಕಾಚಾರ್ಯ ಸೆಲ್ಪಿಗೆ ಪೋಸ್ ಕೊಟ್ಟರು.
ಊಟದ ವ್ಯವಸ್ಥೆ; ಹೊನ್ನಾಳಿ ಮಾತ್ರವಲ್ಲ ನ್ಯಾಮತಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ 179 ಟ್ಯಾಬ್ ವಿತರಿಸಲಾಯಿತು. ಟ್ಯಾಬ್ ಪಡೆದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಕಾಲೇಜಿನ ಸಿಬ್ಬಂದಿಗಳಿಗೆ ಹೊಳಿಗೆ ಊಟದ ವ್ಯವಸ್ಥೆಯನ್ನು ಶಾಸಕರು ಮಾಡಿದ್ದರು.
ಕೋವಿಡ್ ಸಂದರ್ಭದಲ್ಲಿ ಎಂ. ಪಿ. ರೇಣುಕಾಚಾರ್ಯ ಮಾಡುತ್ತಿರುವ ಕಾರ್ಯಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಲವಾರು ರಾಜಕೀಯ ನಾಯಕರು, ವಿವಿಧ ಕ್ಷೇತ್ರದ ಗಣ್ಯರು ಶಾಸಕರ ಜನಪರ ಕಾಳಜಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರಿಗಾಗಿ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ರೇಣುಕಾಚಾರ್ಯ ಹಲವು ಬಾರಿ ಹೊಳಿಗೆ ಊಟ ಹಾಕಿಸಿದ್ದಾರೆ.












Click it and Unblock the Notifications