ದಾವಣಗೆರೆಯಲ್ಲಿ ರಾಜ್ಯಮಟ್ಟದ 6ನೇ ಶ್ವಾನ ಪ್ರದರ್ಶನ, ಗಮನ ಸೆಳೆದ ಶ್ವಾನಗಳ ವಿವರ ಇಲ್ಲಿದೆ
ದಾವಣಗೆರೆಯಲ್ಲಿ ರಾಜ್ಯ ಮಟ್ಟದ 6ನೇ ಶ್ವಾನ ಪ್ರದರ್ಶನ ನಡೆದಿದ್ದು, ಇದರಲ್ಲಿ ಹೆಚ್ಚು ಗಮನ ಸೆಳೆದ ಶ್ವಾನಗಳು ಯಾವುವು ಎಂದು ಇಲ್ಲಿ ಗಮನಿಸಿ.
ದಾವಣಗೆರೆ, ಫೆಬ್ರವರಿ, 06: ದಾವಣಗೆರೆಯಲ್ಲಿ ರಾಜ್ಯ ಮಟ್ಟದ 6ನೇ ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಇಲ್ಲಿಗೆ ಬಂದಂತಹ ಶ್ವಾನಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದವು. ಸ್ಪರ್ಧೆಗೆ ತರಬೇತಿ ಕೊಟ್ಟು ಕರೆದುಕೊಂಡು ಬಂದಿದ್ದ ಶ್ವಾನಗಳು ನೋಡುಗರ ಗಮನ ಸೆಳೆದವು.
ದಾವಣಗೆರೆ "ಪೆಟ್ ಲವರ್ಸ್" ಅಸೋಸಿಯೇಷನ್ ಆಶ್ರಯದಲ್ಲಿ ನಗರದ ಹೈಸ್ಕೂಲ್ ಮೈದಾನದ ಬಾಸ್ಕೆಟ್ ಬಾಲ್ ಕೋರ್ಟ್‌ನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಆರನೇ ವರ್ಷದ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಕಂಡು ಬಂದ ಕೆಲ ತುಣುಕುಗಳು ಗಮನ ಸೆಳೆದವು. ದೇಶಿ ಶ್ವಾನ ತಳಿಗಳ ಪ್ರದರ್ಶನಕ್ಕೆ ಉಚಿತ ಪ್ರವೇಶ ನೀಡಿದ್ದು ವಿಶೇಷವಾಗಿತ್ತು. ಸ್ಟೀವ್ ಆಲ್ಬೆಡಾ ಅವರು ತೀರ್ಪುಗಾರರಾಗಿ ಆಗಮಿಸಿದ್ದರು. ಪ್ರತಿಯೊಂದು ಶ್ವಾನವು ಪ್ರದರ್ಶನ ನೀಡಲು ಆಗಮಿಸಿದ ವೇಳೆ ಪರಿಶೀಲನೆ ನಡೆಸುತ್ತಿದ್ದರು. ಅವುಗಳ ವಯಸ್ಸು ತಿಳಿದು ನಡಿಗೆಗೆ ಅವಕಾಶ ಮಾಡಿಕೊಟ್ಟಿದ್ದು ಗಮನ ಸೆಳೆಯಿತು.
400ಕ್ಕೂ ಹೆಚ್ಚು ಶ್ವಾನಗಳು ಭಾಗಿ
ಇನ್ನು ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ವಿವಿಧ ತಳಿಗಳ ಶ್ವಾನಗಳು ಪಾಲ್ಗೊಂಡಿದ್ದವು. ಬಾಸ್ಕೆಟ್ ಬಾಲ್ ಕೋರ್ಟ್‌ನಲ್ಲಿ ಸುತ್ತಮುತ್ತಲೂ ನೆರೆದಿದ್ದ ಜನರ ನಡುವೆ ತನ್ನ ಮಾಲೀಕರ ಜೊತೆಗೆ ಶ್ವಾನಗಳು ನಡಿಗೆ ಪ್ರದರ್ಶನ ನೀಡಿದವು. ಈ ವೇಳೆ ಕೆಲವರು ಎಸೆಯುತ್ತಿದ್ದ ಬಾಲ್ ಅನ್ನು ದುರುಗುಟ್ಟಿ ನೋಡುತ್ತಿದ್ದ ಶ್ವಾನಗಳ ದೃಶ್ವವಂತೂ ನೋಡುಗರನ್ನು ತನ್ನತ್ತ ಕೈಬಿಸಿ ಕಡೆಯುವಂತಿತ್ತು. ಮಕ್ಕಳಿಗೆ ಉಪಚರಿಸುವಂತೆ ಶ್ವಾನಗಳನ್ನು ನೋಡಿಕೊಳ್ಳುತ್ತಿದ್ದ ಮಾಲೀಕರು ಪ್ರದರ್ಶನಕ್ಕೆ ಆಗಮಿಸಿದವರಿಗೆ ನಿರಾಸೆ ಉಂಟು ಮಾಡಲಿಲ್ಲ. ಯಾರೇ ಕೇಳಿದರೂ ಶ್ವಾನದ ಜೊತೆಗೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಳ್ಳಲು ಸಮ್ಮತಿ ನೀಡಿದರು.

ಪ್ರದರ್ಶನದಲ್ಲಿ ಭಾಗಿಯಾದ ಶ್ವಾನಗಳು
ಪಮೋರಿಯನ್, ಡ್ಯಾಶ್ ಅಂಡ್ ಶ್ಯಾಪ್, ಲ್ಯಾಬ್ರೋ ಡಾಗ್, ಡಾಬರ್ ಮನ್, ಜರ್ಮನ್ ಶಫರ್ಡ್, ರಾಟ್ ವೀಲರ್, ಗ್ರೇಟ್ ಡೇನ್, ಬೆಲ್ಜಿಯಂ ಮೆನಾನಸ್, ಫ್ರೆಂಚ್ ಬುಲ್, ಚೌಚೌ, ಸೈಬೇರಿಯನ್ ಹಸ್ಕಿ, ಬಿಗಲ್ ಸಿಡ್ಜ್, ಗ್ರೇಟ್ ಡೇನ್ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ತಳಿಗಳ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಗಮನ ಸೆಳೆದ ಚೀನಾದ "ಶಿಜ್ಜು" ಶ್ವಾನ
ಇನ್ನು ಚೀನಾದ ತಳಿಯಾದ ಶಿಜ್ಜು ಶ್ವಾನ ಗಮನ ಸೆಳೆಯಿತು. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ತಲೆ ಮೇಲೆ ಕೆಂಪು ರಿಬ್ಬನ್ ಬಣ್ಣದ ದಾರ ಕಟ್ಟಿಕೊಂಡು ಬಂದಿದ್ದ ಈ ಶ್ವಾನ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಗಮನ ಸೆಳೆಯಿತು. ಅಲ್ಲದೆ ಈ ಶ್ವಾನದ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದರು. ಅದರಲ್ಲೂ (ಫೆಬ್ರವರಿ 05) ಭಾನುವಾರವಾದ ಕಾರಣ ಜನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ರಾಜ್ಯದ ನಾನಾ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಾದ ತಮಿಳುನಾಡು, ಗೋವಾ, ಮಹಾರಾಷ್ಟ್ರದಿಂದಲೂ ಸ್ಪರ್ಧೆಗೆ ಶ್ವಾನಗಳನ್ನು ಕರೆದುಕೊಂಡು ಬರಲಾಗಿತ್ತು. ಬೆಸ್ಟ್ ಇನ್ ಶೋ, ಬೆಸ್ಟ್ ಇನ್ ಪಪ್ಪಿ, ಬೆಸ್ಟ್ ಜ್ಯೂನಿಯರ್ ಹ್ಯಾಂಡ್ಲರ್ ವಿಭಾಗಗಳಲ್ಲಿ ಸ್ಪರ್ಧೆ ಮತ್ತು ಟ್ರೋಫಿ ಇದ್ದ ಈ ಸ್ಪರ್ಧೆಯು ಪೆಟ್ ಲವರ್ಸ್‌ಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಅಸೋಸಿಯೇಷಸ್‌ನ ಅರವಿಂದ್, ಸಿರೀಶ್, ಮನೋಜ್, ಸುನೀಲ್, ಶಿವಕುಮಾರ್, ಅಭಿನಂದನ್, ವಿನಯ್, ಚಿರು, ರವಿವರ್ಮ ಸೇರಿದಂತೆ ಹಲವರು ಈ ಸ್ಪರ್ಧೆಯ ಆಯೋಜಕರಾಗಿದ್ದು, ಅಚ್ಚುಕಟ್ಟಾಗಿ ಸ್ಪರ್ಧೆ ಮತ್ತು ಪ್ರದರ್ಶನ ನಡೆಸಿಕೊಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು.












Click it and Unblock the Notifications