ದಾವಣಗೆರೆ: ಅಬಾಕಸ್‌ನಲ್ಲಿ 6 ವರ್ಷದ ಬಾಲಕಿ ಅಮೋಘ ಸಾಧನೆ..
Great Achievement Story: ಬೆಣ್ಣೆ ನಗರಿ ಅಂತಲೇ ಹೆಸರುವಾಸಿಯಾಗಿರುವ ದಾವಣಗೆರೆಯ ಕೀರ್ತಿಪತಾಕೆಯನ್ನು ಪುಟ್ಟ ಬಾಲಕಿಯೊಬ್ಬಳು ರಾಷ್ಟ್ರಮಟ್ಟದಲ್ಲಿ ಹಾರಿಸಿದ್ದಾಳೆ. ನಗರದ ಗುರುಕುಲ ವಸತಿ ಶಾಲೆಯ ಯುಕೆಜಿ ವಿಭಾಗದ ವಿದ್ಯಾರ್ಥಿನಿ ಅರ್ಹಾ ಸುರೇಶ್, ಅಬ್ಯಾಕಸ್ ಗಣಿತ ಲೆಕ್ಕಾಚಾರದಲ್ಲಿ ಅಮೋಘ ಸಾಧನೆ ಮಾಡಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ.
ಕೇವಲ 6 ನಿಮಿಷ 29 ಸೆಕೆಂಡುಗಳಲ್ಲಿ 100 ಗಣಿತದ ಪ್ರಶ್ನೆಗಳನ್ನು ಶೇಕಡಾ 100ರಷ್ಟು ನಿಖರತೆಯೊಂದಿಗೆ (ಒಂದೂ ತಪ್ಪಿಲ್ಲದೆ) ಬಿಡಿಸುವ ಮೂಲಕ ಈ ಪುಟ್ಟ ಬಾಲಕಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. ಈ ಕುರಿತು ಈ ಟಿವಿ ಭಾರತ್ ವರದಿ ಮಾಡಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

'ದಾವಣಗೆರೆಗೆ ಕೀರ್ತಿ ತಂದ ಐದು ವರ್ಷದ ಬಾಲಕಿ'
ದಾವಣಗೆರೆ ನಗರದ ಪಿ.ಜೆ.ಬಡಾವಣೆಯ ನಿವಾಸಿಗಳಾದ ಸುರೇಶ್ ಪುತ್ತೂರು ಹಾಗೂ ಪೂಜಿತಾ ಎಸ್.ಎ.ದಂಪತಿಯ ಐದು ವರ್ಷದ ಮಗಳು ಅರ್ಹಾ ಸುರೇಶ್. ಬಾಲ್ಯದಿಂದಲೇ ಗಣಿತ ಹಾಗೂ ಅಬಾಕಸ್ ವಿಷಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅರ್ಹಾ, ತನ್ನ ಅದ್ಭುತ ಏಕಾಗ್ರತೆ, ತೀವ್ರ ಪರಿಶ್ರಮ ಮತ್ತು ಲೆಕ್ಕಾಚಾರದ ವೇಗದಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಜುಲೈ ತಿಂಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಅಭೂತಪೂರ್ವ ದಾಖಲೆ ನಿರ್ಮಾಣವಾಗಿದೆ. ಬಾಲಕಿಯ ಈ ಸಾಧನೆಯ ಹಿಂದೆ ಪೋಷಕರ ಪ್ರೋತ್ಸಾಹ, ಶಾಲೆಯ ಶಿಕ್ಷಕರ ಹಾಗೂ ಅಬ್ಯಾಕಸ್ ತರಬೇತುದಾರರ ನಿರಂತರ ಶ್ರಮವಿದೆ.
'ಗುರುಕುಲ ಶಾಲೆಗೆ ಹೆಮ್ಮೆಯ ಕ್ಷಣ'
ಬಾಲಕಿಯ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿರುವ ಗುರುಕುಲ ಶಾಲೆಯ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಅವರು ಮಾತನಾಡಿ, 'ನಮ್ಮ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಅರ್ಹಾ ಸುರೇಶ್ ಅಬಾಕಸ್‌ನಲ್ಲಿ ಈ ಸಾಧನೆ ಮಾಡಿರುವುದು ಇಡೀ ಸಂಸ್ಥೆಗೆ ಹೆಮ್ಮೆಯ ವಿಷಯ. ಕಳೆದ ವರ್ಷವೂ ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಮಾಡಿದ್ದರು. ಕೇವಲ 6 ನಿಮಿಷ 29 ಸೆಕೆಂಡುಗಳಲ್ಲಿ 100 ಪ್ರಶ್ನೆಗಳನ್ನು ಸಂಪೂರ್ಣ ಸರಿಯಾಗಿ ಬಿಡಿಸಿರುವುದು ಸಾಮಾನ್ಯ ವಿಷಯವಲ್ಲ. ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಪೋಷಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಕೇವಲ ಶೈಕ್ಷಣಿಕ ಮಾತ್ರವಲ್ಲದೆ, ನಮ್ಮ ಶಾಲೆಯ ಮಕ್ಕಳು ಕ್ರಿಕೆಟ್, ಜೂಡೋ ಮುಂತಾದ ಕ್ರೀಡೆಗಳಲ್ಲೂ ಸಾಧನೆ ಮಾಡುತ್ತಿದ್ದಾರೆ,' ಎಂದು ತಿಳಿಸಿದರು.
ಈ ಬಾಲಕಿಯ ಮುಂದಿನ ಗುರಿ ಏನು?
ಶಾಲೆಯ ಸಂಯೋಜಕಿ ಶ್ವೇತಾ ಅವರು ಮಾತನಾಡಿ, 'ನಮ್ಮ ಶಾಲೆಯ ಮಗು ಎರಡನೇ ಬಾರಿಗೆ ಇಂತಹ ರಾಷ್ಟ್ರೀಯ ಮಟ್ಟದ ದಾಖಲೆ ಬರೆದಿರುವುದು ನಮಗೆ ಅತ್ಯಂತ ಸಂತಸ ತಂದಿದೆ. ಬಾಲಕಿಯ ಈ ಜಾಣ್ಮೆ ಮತ್ತು ವೇಗಕ್ಕೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ಬೆಂಬಲವೇ ಮುಖ್ಯ ಕಾರಣ. ಮುಂದಿನ ದಿನಗಳಲ್ಲಿ ಅರ್ಹಾ ಸುರೇಶ್ ಅವರನ್ನು 'ಏಷ್ಯಾ ಬುಕ್ ಆಫ್ ರೆಕಾರ್ಡ್ನ್ಸ್‌ನಲ್ಲಿ ಸೇರ್ಪಡೆಗೊಳಿಸಲು ಅಗತ್ಯವಿರುವ ಸತತ ತರಬೇತಿ ಮತ್ತು ಪ್ರಯತ್ನಗಳನ್ನು ಮುಂದುವರಿಸಲಿದ್ದೇವೆ,' ಎಂದು ಹೇಳಿದರು. ಇನ್ನೂ ಅರ್ಹಾ ಸುರೇಶ್ ಅವರ ಈ ಅಸಾಧಾರಣ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.


Click it and Unblock the Notifications
