ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇದ್ದಕ್ಕಿಂದ್ದಂತೆ ಸುಟ್ಟು ಭಸ್ಮವಾದ ಕಾರು
ದಾವಣಗೆರೆ, ಜುಲೈ 12: ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲಿವೆ. ಹಾಗೆಯೇ ಇಂದು (ಜುಲೈ 12) ಸಂಜೆ ದಾವಣಗೆರೆ ಜಿಲ್ಲೆಯ ಹುಣಸೆಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ನಾಲ್ವರು ಪಾರಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಆಂಧ್ರ ಪ್ರದೇಶದಿಂದ ಗೋವಾ ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಕಾರಿನಲ್ಲಿದ್ದ ನಾಲ್ವರು ಕೆಳಗಿಳಿದಿದ್ದಾರೆ. ಆಗ, ಕಾರು ಹೊತ್ತಿ ಉರಿದಿದ್ದು, ಸಂಪೂರ್ಣ ಸುಟ್ಟು ಭಸ್ಮ ಆಗಿದೆ. ಬಳಿ ಅಲ್ಲಿನ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬಂದಿ ಬರುವಷ್ಟರಲ್ಲಿಯೇ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ವರದಿ ಆಗಿದೆ.

ಐವರು ಸ್ಥಳದಲ್ಲೇ ಸಾವು: ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿಳಿ ಬಣ್ಣದ ಇನ್ನೋವಾ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬಳಿ ಗೌರಿಬಿದನೂರು ರಾಜ್ಯ ಹೆದ್ದಾರಿಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಕರೇನಹಳ್ಳಿ ನಿವಾಸಿಗಳಾದ ಡಿ.ಎಂ. ಈಶ್ವರಪ್ಪ, ಪುರುಷೋತ್ತಮ(75), ಕಾಳಪ್ಪ(65), ನಾರಾಯಣಪ್ಪ(70) ಮತ್ತು ಕಾರು ಚಾಲಕ ಕಾರ್ತಿಕ್ ಮೃತಪಟ್ಟವರಾಗಿದ್ದಾರೆ.
ಇನ್ನೋವಾ ಕಾರಿನಲ್ಲಿ 8 ಜನ ದೊಡ್ಡಬಳ್ಳಾಪುರದಿಂದ ಗೌರಿಬಿದನೂರು ಬಳಿಯ ಮಂಚೇನಹಳ್ಳಿಯ ಭೀಮೇಶ್ವರ ಬೆಟ್ಟಕ್ಕೆ ಹೊರಟಿದ್ದರು. ಲಾರಿ ಓವರ್ ಟೇಕ್ ಮಾಡಲು ಹೋಗಿ ಇನ್ನೋವಾ ಕಾರು ಪಲ್ಟಿ ಆಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡ ಮೂವವರನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳಕ್ಕೆ ಆಗಮಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಟೆಂಪೋಗೆ ಲಾರಿ ಡಿಕ್ಕಿ: ಜೂನ್ 30ರ ಸೋಮವಾರ ಟೆಂಪೋಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಘಟನೆಯಲ್ಲಿ ಟೆಂಪೋದಲ್ಲಿದ್ದ ಮೂವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ಅನ್ನಮಯ್ಯ ಜಿಲ್ಲೆಯ ಕುರಬಳಕೋಟ ಮಂಡಲದ ಚೆನ್ನಾಮರ್ರಿ ಮಿಟ್ಟ ಬಳಿ ನಡೆದಿತ್ತು.
ಮೃತರನ್ನು ಮೇಘರಾಜ್ (17), ಚರಣ್(17) ಮತ್ತು ಶ್ರಾವಣಿ(28) ಎಂದು ಗುರುತಿಸಲಾಗಿದ್ದು, ಇವರು ಬಾಗೇಪಲ್ಲಿ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿತ್ತು.
ಲಾರಿ ಡಿಕ್ಕಿ ಹೊಡೆದ ವೇಳೆ ಟೆಂಪೋ ಟ್ರಾವೆಲರ್ ಮದನಪಲ್ಲಿಯಿಂದ ಬಾಗೇಪಲ್ಲಿ ಕಡೆಗೆ ಹೋಗುತ್ತಿತ್ತು. ಡಿಕ್ಕಿಯ ರಭಸಕ್ಕೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ಪೋಲಿಸರು ತಿಳಿಸಿದರು. ಟೆಂಪೋದಲ್ಲಿದ್ದವರು ತಿರುಪತಿ ದರ್ಶನ ಮುಗಿಸಿ ಊರಿಗೆ ವಾಪಸ್ ತೆರಳುತ್ತಿದ್ದರು.
ಗಾಯಾಳುಗಳನ್ನು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಅಪಘಾತದ ನಂತರ ಲಾರಿ ಸಹಿತ ಚಾಲಕ ಸ್ಥಳದಿಂದ ಪರಾರಿ ಆಗಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಯು ಪ್ರಗತಿಯಲ್ಲಿದೆ ಎಂದು ಪೋಲಿಸ್ ಅಧಿಕಾರಿ ಸತ್ಯನಾರಾಯಣ ತಿಳಿಸಿದ್ದರು.
ಆಂಧ್ರಪ್ರದೇಶದ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿಯವರು ಭೀಕರ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಳುಗಳ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಅಗತ್ಯ ವೈದ್ಯಕೀಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರು.
ಬೈಕ್-ಸ್ಕೂಟರ್ ಡಿಕ್ಕಿ: ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ಹಿರೀಸಾವೆ-ಮೇಟಿಕರೆ ವೃತ್ತದಲ್ಲಿ ಬೈಕ್-ಸ್ಕೂಟರ್ ಡಿಕ್ಕಿ ಹೊಡೆದುಕೊಂಡಿದ್ದು, ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದರು.
ಹೋಬಳಿಯ ಬಾಳಗಂಚಿ ನಿವಾಸಿ ಚಂದ್ರೇಗೌಡ (50) ಮತ್ತು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ವಡಕೇಘಟ್ಟ ಗ್ರಾಮದ ಲಕ್ಷ್ಮಮ್ಮ (55) ಮೃತಪಟ್ಟವರು. ಚಂದ್ರೇಗೌಡ ಅವರು ಪತ್ನಿ ಸವಿತಾ ಹಾಗೂ ಅತ್ತಿಗೆ ಲಕ್ಷ್ಮಮ್ಮ ಜೊತೆಗೆ ಹಿರೀಸಾವೆಯಲ್ಲಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಸ್ಕೂಟರ್‌ನಲ್ಲಿ ಸ್ವಗ್ರಾಮಕ್ಕೆ ಹೋಗುತ್ತಿದ್ದರು. ಅಪಘಾತದಲ್ಲಿ ಸವಿತಾ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿತ್ತು.












Click it and Unblock the Notifications