ದಾವಣಗೆರೆಯಲ್ಲಿ ಆಸ್ತಿ ಖರೀದಿ ಮಾಡ್ತಿರಾ?, ತಪ್ಪದೇ ಓದಿ
ದಾವಣಗೆರೆ, ಜನವರಿ 20: ದಾವಣಗೆರೆ ಜಿಲ್ಲೆಯಲ್ಲಿ ಆಸ್ತಿ ಖರೀದಿ ಮಾಡುವ ಆಲೋಚನೆ ಇದ್ದರೆ ತಪ್ಪದೇ ಇದನ್ನು ಓದಿ. ಜಿಲ್ಲಾ ವ್ಯಾಪ್ತಿಯಲ್ಲಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿಯಲ್ಲಿ ಕೆಲವು ಬದಲಾವಣೆಯಾಗಿದೆ. ಈ ದರಪಟ್ಟಿ ದಿನಾಂಕ 1/10/2023ರಿಂದ ಜಾರಿಯಲ್ಲಿದ್ದಂತೆ ಮುಂದಿನ ಆದೇಶವರೆಗೆ ಜಾರಿಯಲ್ಲಿರುತ್ತದೆ.
ಈ ಕುರಿತು ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ ಇಸ್ಮಾಯಿಲ್ ಎಫ್ ಡಂಬರಮತ್ತೂರ, ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಮುದ್ರಾಂಕಗಳ ಉಪ-ಆಯುಕ್ತರು ದಾವಣಗೆರೆ ಜಿಲ್ಲೆ, ದಾವಣಗೆರೆ ಹಾಗೂ ಸದಸ್ಯರು ಕೇಂದ್ರ ಮೌಲ್ಯಮಾಪನ ಸಮಿತಿ ಆದೇಶ ಹೊರಡಿಸಿದ್ದಾರೆ.

ವಿಶೇಷ ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಲಾಗಿದ್ದು, ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ ಮತ್ತು ಜಗಳೂರು ಉಪನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ 2023-24ನೇ ಸಾಲಿನ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿಯಲ್ಲಿ ತಿದ್ದುಪಡಿ ಮಾಡಲಾಗಿದೆ.
ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ ಮತ್ತು ಜಗಳೂರು ಉಪನೋಂದಣಿ ಕಛೇರಿಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಗಳನ್ನು ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು 2003 ರ ಅಧಿನಿಯಮ 7(3)ರಲ್ಲಿ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೌಲ್ಯ ಮಾಪನ ಉಪ-ಸಮಿತಿಯು ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಗಳನ್ನು 2023-24ನೇ ಸಾಲಿಗೆ ಪರಿಷ್ಕರಿಸಿತ್ತು.
ಆದರೆ ಈ ಅಧಿಸೂಚನೆಯಲ್ಲಿ ಕೆಲವು ನ್ಯೂನ್ಯತೆಗಳಿದ್ದು, ಸದರಿ ನ್ಯೂನ್ಯತೆಗಳನ್ನು ಕೇಂದ್ರ ಮೌಲ್ಯಮಾಪನ ಸಮಿತಿಯು ಸರಿಪಡಿಸಿದ್ದು, ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಈ ತಿದ್ದುಪಡಿಗಳು ದಿನಾಂಕ 01/10/2023 ರಿಂದ ಪೂರ್ವಾನ್ವಯವಾಗುವಂತೆ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಈ ತಿದ್ದುಪಡಿ ಅಧಿಸೂಚನೆಯು ದಿನಾಂಕ 01/10/2023ರಿಂದ ಜಾರಿಯಲ್ಲಿದ್ದಂತೆ ಮುಂದಿನ ಆದೇಶವರೆಗೆ ಜಾರಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ತಿದ್ದುಪಡಿಯಾದ ವಿವರಗಳು; ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರು ನಗರ/ ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ ಹೊರತುಪಡಿಸಿ ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು.
ಕೆಳಕಂಡ ಕೃಷಿ ಜಮೀನು ಅಥವಾ ಭೂಪರಿವರ್ತನೆಯಾದ ಅಭಿವೃದ್ಧಿಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು. ಪಟ್ಟಣ ಪಂಚಾಯತ್/ ಪುರಸಭೆ/ ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಗೆ ಬರುವ ಸ್ಥಿರಾಸ್ತಿಗಳು ಹಾಗೂ ಹೊರಗೆ ಬರುವ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ. 5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ) ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
ಭೂಪರಿವರ್ತನೆಯಾದ ಪೂರ್ಣ ವಿರ್ಸ್ತೀಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಈ ಕೆಳಕಂಡಂತೆ ದರಗಳನ್ನು ಅಳವಡಿಸುವುದು.
5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ) ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ) ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ) ಆಯಾ ಪ್ರದೇಶದ ನಿವೇಶನದ ದರದ 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು ಎಂದು ತಿಳಿಸಲಾಗಿದೆ.
20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ) ಆಯಾ ಪ್ರದೇಶದ ನಿವೇಶನದ ದರದ 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
1 ಎಕರೆ ಮೇಲ್ಪಟ್ಟ ವಿಸ್ತೀರ್ಣದ ಜಮೀನಿಗೆ ಆಯಾ ಕೃಷಿ ಜಮೀನಿನ ತರಹದ ದರ. ಕೈಗಾರಿಕೋಪಯೋಗಿ 55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ). ವಾಸೋಪಯೋಗಿ 65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ). ವಾಣಿಜ್ಯೋಪಯೋಗಿ/ ವಸತಿಯೇತರ 80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).
ಪಟ್ಟಣ ಪಂಚಾಯ್ತಿ/ ಪುರಸಭೆ/ ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರಗೆ ಬರುವ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ. ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿರ್ಸ್ತೀಣದ (ಸರ್ವೆ ನಂಬರಿನ ಸಂಪೂರ್ಣ ವಿರ್ಸ್ತೀಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.
5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದ 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
ಕೈಗಾರಿಕೋಪಯೋಗಿ (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ) 55 % (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ). ವಾಸೋಪಯೋಗಿ (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ) 65 % (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ). ವಾಣಿಜ್ಯೋಪಯೋಗಿ/ ವಸತಿಯೇತರ (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ) 80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).
ಅಭಿವೃದ್ಧಿ ಹೊಂದದ ಸ್ವತ್ತುಗಳು ಅಂದರೆ ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವ ವೃತ್ತ/ ಆಂತರಿಕ ರಸ್ತೆಗಳು ಇತ್ಯಾದಿ, ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.












Click it and Unblock the Notifications