Vani Vilasa Sagara Dam: ಇನ್ನೊಂದು ವಾರದಲ್ಲಿ ಭರ್ತಿಯಾಗುತ್ತಾ ವಾಣಿ ವಿಲಾಸ ಜಲಾಶಯ?-ನೀರಿನ ಮಟ್ಟ ತಿಳಿಯಿರಿ
Vani Vilasa Sagara Dam: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಹಾಗೆಯೇ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿರುವ ಪರಿಣಾಮ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಹಾಗಾದರೆ ಇದೀಗ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
ಭಾರೀ ಮಳೆ ಮುಂದುವರೆದ ಪರಿಣಾಮ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. ಅಂದಹಾಗೆ ಜಲಾಶಯಕ್ಕೆ 3,812 ಕ್ಯೂಸೆಕ್ ಒಳಹರಿವು ನೀರು ಇದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 123.50 ಅಡಿ ತಲುಪಿದ್ದು, 125 ಅಡಿ ಕಡೆ ದಾಪುಗಾಲಿಡುತ್ತಿದೆ.

ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾದ ಹಿನ್ನೆಲೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ 125 ಅಡಿ ತಲುಪಲಿದೆ. ವಿವಿ ಸಾಗರ ಡ್ಯಾಂ ಒಟ್ಟು 135 ಅಡಿ ಎತ್ತರವಿದ್ದು, 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ. 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಜಲಾಶಯ ಇದಾಗಿದೆ.
ಡ್ಯಾಂ ನಿರ್ಮಾಣ ಆಗಿದ್ದು ಯಾವಾಗ?: ಹಿರಿಯೂರು ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ 1907ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ವಾಣಿ ವಿಲಾಸ ಸಾಗರ ಡ್ಯಾಂ ನಿರ್ಮಾಣ ಮಾಡಲಾಗಿದೆ. 2022ರಲ್ಲಿ ಜಲಾಶಯ ಭರ್ತಿಯಾಗಿ ಎರಡನೇ ಬಾರಿಗೆ ಡ್ಯಾಂ ಕೋಡಿ ಬಿದ್ದಿತ್ತು. ಇದೀಗ ಇನ್ನು ಕೇವಲ 6 ಅಡಿ ನೀರು ಹರಿದು ಬಂದರೆ, ಜಲಾಶಯ ಮೂರನೇ ಬಾರಿಗೆ ಕೋಡಿ ಬೀಳಲಿದೆ.
ರಾಜ್ಯದ ಬಹುತೇಕ ಜಲಾಶಯಗಳು ಮುಂಗಾರು ಸಮಯದಲದಲು ತುಂಬುವುದು ವಾಡಿಕೆ ಇದೆ. ಆದರೆ, ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಹರಿವು ಗಮನಿಸಿದಾಗ ಹಿಂಗಾರು ಮಳೆಗೆ ಅತೀ ಹೆಚ್ಚು ನೀರು ಸಂಗ್ರಹಣೆ ಆಗುತ್ತಿರುವುದು ವಿಶೇಷವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ.
ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಅಣೆಕಟ್ಟು. ಇನ್ನು ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು 1898ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಾಣ ಕಾಮಗಾರಿ ಆರಂಭಿಸಿತ್ತು.












Click it and Unblock the Notifications