Vani Vilasa Sagara Dam: ವಾಣಿ ವಿಲಾಸ ಜಲಾಶಯಕ್ಕೆ ಮುಂದುವರೆದ ಒಳಹರಿವು- ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಗೊತ್ತಾ.?
Vani Vilasa Sagara Dam: ಈಗಾಗಲೇ ಭಾರೀ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಹಲವು ಜಲಾಶಯಗಳು ತುಂಬಿದ್ದರೆ, ಇನ್ನು ಕೆಲವು ಡ್ಯಾಂಗಳು ಭರ್ತಿಯಾಗುವ ಹಂತವನ್ನು ತಲುಪಿವೆ. ಹಾಗೆಯೇ ಇದೀಗ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಒಳಹರಿವು ಹರಿದುಬರುತ್ತಿದೆ. ಹಾಗಾದರೆ ಇದೀಗ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿರುವ ವಾಣಿವಿಲಾಸ ಜಲಾಶಯಕ್ಕೆ ಒಳಹರಿವು ಮುಂದುವರೆದಿದೆ. ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ಡ್ಯಾಂಗೆ 2,668 ಕ್ಯೂಸೆಕ್ ಒಳಹರಿವು ಹರಿವಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 116.30 ಅಡಿ ತಲುಪಿದೆ. ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಸುಮಾರು ಮೂರು ಅಡಿಗೂ ಹೆಚ್ಚು ನೀರು ಹರಿದು ಬಂದಿದೆ.

89 ವರ್ಷಗಳ ಬಳಿಕ 2022ರಲ್ಲಿ ಎರಡನೇ ಬಾರಿಗೆ ಡ್ಯಾಂ ಕೋಡಿ ಬಿದ್ದಿತ್ತು. ಸುಮಾರು ಒಂದು ತಿಂಗಳ ಕಾಲ ವೇದಾವತಿ ನದಿ ಹರಿದಿತ್ತು. ಇದರಿಂದ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಳ ಆಗಿತ್ತು. 2023ರಲ್ಲಿ ಡ್ಯಾಂಗೆ ಯಾವುದೇ ಹೇಳಿಕೊಳ್ಳುವಂತಹ ನೀರು ಹರಿದು ಬಂದಿರಲಿಲ್ಲ.
ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆ ಆಗುತ್ತಿದ್ದು ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಇದೇ ರೀತಿ ಇನ್ನೂ ಒಂದೆರಡು ತಿಂಗಳಿನಲ್ಲಿ ಹೆಚ್ಚು ಮಳೆ ಬಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದರೆ, ಜಲಾಶಯ ಈ ಬಾರಿ ಕೋಡಿ ಬೀಳುವ ಸಾಧ್ಯತೆ ಇರುತ್ತದೆ. ಸುಮಾರು 14 ಅಡಿ ನೀರು ಜಲಾಶಯಕ್ಕೆ ಹರಿದು ಬಂದರೇ ಜಲಾಶಯ ಬಹುತೇಕ ಕೋಡಿ ಬೀಳುವುದು ಗ್ಯಾರಂಟಿ ಎನ್ನಲಾಗುತ್ತಿದೆ.
1907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿರಿಯೂರು ಪ್ರದೇಶದ ಅಚ್ಚುಕಟ್ಟುದಾರರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ವೇದಾವತಿ ನದಿಗೆ ಅಡ್ಡಲಾಗಿ ಮಾರಿ ಕಣಿವೆ ಬಳಿ ವಿವಿ ಸಾಗರ ಜಲಾಶಯವನ್ನು ನಿರ್ಮಾಣ ಮಾಡಿದರು. ಈ ಜಲಾಶಯ ನಿರ್ಮಾಣವಾಗಿ ಸುಮಾರು 118 ವರ್ಷ ಕಳೆದಿದೆ. ಹಿರಿಯೂರು, ಚಿತ್ರದುರ್ಗ, ಚಳ್ಳೆಕೆರೆ ಸೇರಿದಂತೆ ಡಿಆರ್‌ಡಿಓಗೆ ಕುಡಿಯುವ ನೀರಿನ ಮೂಲವಾಗಿದೆ.
ಇನ್ನು ಹಿರಿಯೂರು ತಾಲ್ಲೂಕಿನಲ್ಲಿ ಶುಕ್ರವಾರ (ಆಗಸ್ಟ್ 17) ರಾತ್ರಿ ಉತ್ತಮ ಮಳೆಯಾಗಿದ್ದು, ಈಶ್ವರಗೆರೆಯಲ್ಲಿ 117.6 ಮಿಲಿ ಮೀಟರ್ ಅತಿ ಹೆಚ್ಚು ಮಳೆಯಾಗಿದೆ. ಉಳಿದಂತೆ ಸೂಗೂರಿನಲ್ಲಿ 93.4, ಇಕ್ಕನೂರಿನಲ್ಲಿ 45.2, ಹಿರಿಯೂರು 42.6, ಬಬ್ಬೂರಿನಲ್ಲಿ 34 ಮಿಲಿ ಮೀಟರ್ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ 66.56 ಮಿಲಿ ಮೀಟರ್ ಸರಾಸರಿ ಮಳೆ ಸುರಿದಿದೆ.












Click it and Unblock the Notifications