ಚಿತ್ರದುರ್ಗ, ಉಡುಪಿ ಜಿಲ್ಲೆಯ ಕೊರೊನಾ ವೈರಸ್ ಅಪ್ಡೇಟ್ಸ್
ಚಿತ್ರದುರ್ಗ, ಮೇ 28: ಕೋಟೆನಾಡು ಚಿತ್ರದುರ್ಗದಲ್ಲಿ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಗುರುವಾರವೂ ಸಹ 6 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ.
ಅದೇ ರೀತಿ ಉಡುಪಿಯಲ್ಲಿ ಇಂದು ಒಂದೇ ದಿನ 27 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಮಹಾರಾಷ್ಟ್ರದ್ದೇ ದೊಡ್ಡಪಾಲು ಇದೆ. ಇದರಿಂದ ಉಡುಪಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 147 ಕ್ಕೆ ಏರಿದೆ.
ಮಹಾರಾಷ್ಟ್ರ ದಿಂದ ಉಡುಪಿಗೆ ಬಂದ 24 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ತೆಲಂಗಾಣ 2, ಕೇರಳದ ಒಬ್ಬರಿಗೆ ಕೋವಿಡ್19 ದೃಢವಾಗಿದೆ. 18 ಪುರುಷರು, 8 ಮಹಿಳೆಯರು ಹಾಗೂ ಒಂದು ಹೆಣ್ಣು ಮಗುವಿನಲ್ಲಿ ಸೋಂಕು ಕಂಡುಬಂದಿದೆ.

ಇನ್ನು ಚಿತ್ರದುರ್ಗಕ್ಕೆ ಉತ್ತರ ಪ್ರದೇಶದ ಕಾರ್ಮಿಕರು ಕಂಟಕ ತಂದಿದ್ದರಾ ಎನ್ನುವಂತಾಗಿದೆ. ಚೆನ್ನೈನಿಂದ ಉತ್ತರಪ್ರದೇಶಕ್ಕೆ ಅನುಮತಿ ಇಲ್ಲದೆ ಅಕ್ರಮವಾಗಿ ಸರಕು ಲಾರಿಯಲ್ಲಿ ಪ್ರಯಾಣಿಸುತ್ತಿದ್ದ 58 ಮಂದಿ ಕಾರ್ಮಿಕರು ಚಳ್ಳಕೆರೆ ತಾಲ್ಲೂಕಿನ ಮೂಲಕ ಪ್ರಯಾಣಿಸುತ್ತಿದ್ದರು.
ಪಾವಗಡ-ಪರಶುರಾಂಪುರ ನಡುವೆ ಇರುವ ನಾಗಪ್ಪನಹಳ್ಳಿ ಚೆಕ್ ಪೋಸ್ಟ್ ಬಳಿ ತಪಾಸಣೆ ಮಾಡಿದಾಗ ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಇವರನ್ನು ಮೇ 15 ರಂದು ಚಳ್ಳಕೆರೆ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿ ಇರಿಸಿದ್ದರು. 58 ಕಾರ್ಮಿಕರ ಪೈಕಿ ಮೇ 26 ರಂದು 20 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆ ಆಗಿದ್ದವು. ಇದೀಗ ಮತ್ತೆ 6 ಜನರಿಗೆ ಸೋಂಕು ದೃಢಪಟ್ಟಿದೆ.
ಒಂದೇ ಹಾಸ್ಟೆಲ್ ನಲ್ಲಿ ಕಾರ್ಮಿಕರಿಗೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸದ್ಯ ಚಿತ್ರದುರ್ಗದಲ್ಲಿ ಒಟ್ಟು 37 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳಲ್ಲಿ 5 ಜನನ ಗುಣಮುಖರಾಗಿದ್ದು, ಕೋವಿಡ್ ಆಸ್ಪತ್ರೆಯಲ್ಲಿ 32 ಆ್ಯಕ್ಟಿವ್ ಪ್ರಕರಣಗಳಿವೆ. ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿತ್ರದುರ್ಗದ ಕ್ಯಾನ್ಸರ್ ಪೀಡಿತ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಳಿಗೂ ಕೊರೊನಾ ವೈರಸ್ ಪಾಸಿಟಿವ್ ಇದೆ.
ಮೊದಲು ಹಸಿರು ವಲಯದಲ್ಲಿದ್ದ ಚಿತ್ರದುರ್ಗ ಜಿಲ್ಲೆಗೆ ಹೊರರಾಜ್ಯದ ಕಾರ್ಮಿಕರಿಂದ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಈಗಾಗಲೇ 4 ಜನ ಸೋಂಕಿನಿಂದ ಗುಣಮುಖವಾಗಿ ಬಿಡುಗಡೆ ಆಗಿದ್ದು, ಮತ್ತೊಂದು ಪ್ರಕರಣ ದಾವಣಗೆರೆ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಚಿತ್ರದುರ್ಗದಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 37 ಕ್ಕೆ ಏರಿಕೆಯಾಗಿದೆ.












Click it and Unblock the Notifications