ಟೈಯರ್ ಬ್ಲಾಸ್ಟ್: ಚಿತ್ರದುರ್ಗದಲ್ಲಿ ಹೊತ್ತಿ ಉರಿದ ಸ್ಪಿರಿಟ್ ಟ್ಯಾಂಕರ್
ಚಿತ್ರದುರ್ಗ, ಮೇ 14: ಚಲಿಸುತ್ತಿದ್ದ ಟ್ಯಾಂಕರ್ ನ ಟೈಯರ್ ಬ್ಲಾಸ್ಟ್ ಆಗಿ ಪಲ್ಟಿ ಹೊಡೆದಿದ್ದರಿಂದ ಟ್ಯಾಂಕರ್ ಹೊತ್ತಿ ಉರಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಹಿರಿಯೂರು ತಾಲ್ಲೂಕಿನ ಕೆ.ಆರ್ ಹಳ್ಳಿ ಗೇಟ್ ಬಳಿ ಘಟನೆ ನಡೆದಿದ್ದು, ಸ್ಪಿರಿಟ್ ಟ್ಯಾಂಕರ್ ಪಲ್ಟಿಯಾದ ರಭಸಕ್ಕೆ ಹೊತ್ತಿ ಉರಿದಿದೆ. ಟ್ಯಾಂಕರ್ ನಲ್ಲಿದ್ದ ಸ್ಪಿರಿಟ್ ರಸ್ತೆಯಲ್ಲಿ ಚೆಲ್ಲಿದ್ದು, ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.

ಚಿತ್ರದುರ್ಗದಿಂದ ತುಮಕೂರು ಕಡೆಗೆ ಹೋಗುವ ವೇಳೆ ಈ ಘಟನೆ ನಡೆದಿದೆ. ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications