ಮಹಿಳೆಯರು ಸ್ವಾಮಿಗಳ ಬಳಿ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ: ಶಾಮನೂರು ಶಿವಶಂಕರಪ್ಪ
ಚಿತ್ರದುರ್ಗ, ನವೆಂಬರ್, 09: ಮುರುಘಾ ಶ್ರೀಗಳು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಿಂದಾಗಿ ಹೆಣ್ಣುಮಕ್ಕಳು ಸ್ವಾಮಿಗಳ ಬಳಿ ಹೋಗಲಾರದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಾಣೇಹಳ್ಳಿಯಲ್ಲಿ ಹೇಳಿದರು.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿ ಬಹಿರಂಗವಾದ ಬಳಿಕ ಲಿಂಗಾಯತ-ವೀರಶೈವ ಸಮಾಜದ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ನಾಟಕೋತ್ಸವ ಸಮಾರಂಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ಮಾತನಾಡಿ, "ಹೆಣ್ಣು ಮಕ್ಕಳು ಸ್ವಾಮೀಜಿ ಬಳಿ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ಬರಬಾರದು. ನಮ್ಮ ಹೆಣ್ಣು ಮಕ್ಕಳು ಕೂಡ ಎಚ್ಚರವಾಗಿ ಇರಬೇಕು. ಪ್ರಕರಣದ ಬಗ್ಗೆ ವೀರಶೈವ ಮಹಾಸಭಾ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ" ಎಂದರು.
ಮುರುಘಾಶ್ರೀ ವಿರುದ್ಧ ತಿರುಗಿಬಿದ್ದ ಶಾಮನೂರು
ಪೋಕ್ಸೊ ಕೇಸ್‍ನಲ್ಲಿ ಮುರುಘಾಶ್ರೀ ಜೈಲುಪಾಲಾಗಿದ್ದಾರೆ. ಹೀಗಾಗಿ ಈ ಪ್ರಕರಣದ ಬಗ್ಗೆ ವೀರಶೈವ ಮಹಾಸಭಾ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು. ಹಾಗೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನೇಕರು ಪರೋಕ್ಷವಾಗಿ ಮುರುಘಾಶ್ರೀ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೇ ಚಾರ್ಜ್ ಶೀಟ್‌ನಲ್ಲಿನ ಅಂಶಗಳು ಬಯಲಾದ ಬಳಿಕ ಮುಖಂಡರು ಸಿಡಿಮಿಡಿಗೊಂಡರು.

ಮುರುಘಾ ಶ್ರೀಗಳಿಂದ ಕ್ಷಮಿಸಲಾರದ ಅಪರಾಧ
ಇನ್ನು ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಯಡಿಯೂರಪ್ಪ, ಮುರುಘಾ ಶರಣರು ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಅವರಿಗೆ ಕಾನೂನು ಪ್ರಕಾರ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದ್ದರು. ಉಡುಪಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಈ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮುರುಘಾ ಶರಣರಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು "ಮುರುಘಾ ಶ್ರೀ ಕ್ಷಮಿಸಲಾರದ ಅಕ್ಷಮ್ಯ ಅಪರಾಧವನ್ನು ಮಾಡಿದ್ದಾರೆ. ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಎಲ್ಲರೂ ಅವರ ಕೃತ್ಯವನ್ನು ಖಂಡಿಸಬೇಕು. ಅವರಿಗೆ ತಕ್ಕ ಶಿಕ್ಷೆ ಆಗಬೇಕು" ಎಂದು ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ಯಪಡಿಸಿದರು.












Click it and Unblock the Notifications