ಮುರುಘಾ ಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ; ಸಂಧಾನ ಸಭೆ ವಿಫಲ
ಚಿತ್ರದುರ್ಗ, ಆಗಸ್ಟ್, 28: ಕೋಟೆ ನಾಡು ಚಿತ್ರದುರ್ಗದ ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆ ಪ್ರಕರಣ ಚಿತ್ರದುರ್ಗಕ್ಕೆ ವರ್ಗವಾಣೆ ಆಗಿದೆ. ಅಕ್ಕಮಹಾದೇವಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಶ್ರೀಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಪ್ರಕರಣವನ್ನು ಇಲ್ಲಿಗೆ ಕೈಬಿಡಲು ಸಂಧಾನ ಸಭೆ ನಡೆಸಲಾಗಿದ್ದು, ಈ ಸಂಧಾನ ಸಭೆ ವಿಫಲವಾಗಿದೆ. ರಾತ್ರಿ ಚಿತ್ರದುರ್ಗದ ಸಿದ್ದಾಪುರ ನಾಗರಾಜ್ ಅವರ ಮನೆಯಲ್ಲಿ ಉದ್ಯಮಿ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಸಂಧಾನ ಸಭೆಯನ್ನು ನಡೆಸಿದ್ದರು. ಸಭೆಯಲ್ಲಿ ಭಗೀರಥ ಪೀಠದ ಪುರುಷೋತ್ತಮ ನಂದ ಶ್ರೀಗಳು, ಬಸವಕುಮಾರ ಸ್ವಾಮೀಜಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಇದೀಗ ಸಭೆ ವಿಫಲವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಪೊಲೀಸರು ಇಬ್ಬರು ಬಾಲಕಿಯರ ಹೇಳಿಕೆ ಪಡೆದಿದ್ದಾರೆ. ಇತ್ತ ಈ ಸಂದರ್ಭದಲ್ಲಿ ಬಾಲಮಂದಿರಕ್ಕೆ ಅಪ್ರಾಪ್ತ ಬಾಲಕಿಯರ ಪೋಷಕರು ಆಗಮಿಸಿದ್ದರು.

ಬಸವರಾಜ್ ದಂಪತಿ ಗೌಪ್ಯ ಸ್ಥಳದಲ್ಲಿದ್ದಾರಾ?
ಮತ್ತೊಂದು ಕಡೆ ಮಠದ ಆಡಳಿತ ಆಧಿಕಾರಿ ಎಸ್.ಕೆ.ಬಸವರಾಜ್ ಮತ್ತು ಪತ್ನಿ ಯಾರ ಸಂಪರ್ಕಕ್ಕೂ ಸಿಗದೇ ಗೌಪ್ಯ ಸ್ಥಳದಲ್ಲಿದ್ದಾರೆ ಎನ್ನಲಾಗಿದೆ. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜೀ ಮಾತಿಲ್ಲ ಎಂದು ಆಪ್ತರ ಬಳಿಕ ಮಾತುಕತೆ ನಡೆಸಲಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇನ್ನು ಮುಖಂಡರು ನಿರಂತರವಾಗಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ರಾಜಿ ಸಂಧಾನ ಆಗುವುದಿಲ್ಲಿ ಎನ್ನುವುದು ಬಹುತೇಕ ಖಚಿತವಾಗಿದೆ.

ಆಡಳಿತಾಧಿಕಾರಿ ಬಸವರಾಜ್ ಮನೆಗೆ ಬೀಗ
ಲೈಂಗಿಕ ದೌರ್ಜನ್ಯ ಮತ್ತು ಬ್ಲಾಕ್ ಮೇಲ್ ಕೇಸ್ ದಾಖಲಾಗಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಮಾಜಿ ಶಾಸಕ ಹಾಗೂ ಮುರುಘಾ ಮಠದ ಆಡಳಿತಾಧಿಕಾರಿ ಎಸ್.ಕೆ. ಬಸವರಾಜ್ ಅವರ ಮನೆಗೆ ಬೀಗ ಹಾಕಲಾಗಿದೆ. ಕಳೆದ ಮೂರು ದಿನಗಳಿಂದ ಬಸವರಾಜ್ ದಂಪತಿಗಳಿಬ್ಬರು ಗೌಪ್ಯ ಸ್ಥಳದಲ್ಲಿದ್ದಾರೆ ಎಂದು ಮಾಹಿತಿ ಬಹಿರಂಗ ಆಗಿದೆ. ಇನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಇಬ್ಬರ ವಿರುದ್ಧ ವಾರ್ಡನ್ ರಶ್ಮಿ ದೂರು ದಾಖಲಿಸಿದ್ದರು. ಲೈಂಗಿಕ ದೌರ್ಜನ್ಯ ಮತ್ತು ಬ್ಲಾಕ್ ಮೇಲ್ ಕೇಸ್ ದಾಖಲು ಮಾಡಿದ್ದು, ಕಳೆದ ಮೂರು ದಿನಗಳಿಂದ ಅವರ ನಿವಾಸದಲ್ಲಿ ಯಾರು ಇಲ್ಲದೆ ಖಾಲಿ ಆಗಿದೆ.












Click it and Unblock the Notifications