KWIN City: ಬೆಂಗಳೂರಿಗೆ ಬಂಪರ್, 'ಕ್ವೀನ್ ಸಿಟಿ'ಯಲ್ಲಿ ವಿಶ್ವದಲ್ಲೇ ಮೊದಲ 'ಬಿಝ್ಇಂಟೆಲ್ ಹಬ್' ಸ್ಥಾಪನೆ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಮಹಾತ್ವಾಕಾಂಕ್ಷೆಯ ಅತ್ಯಾಧುನಿಕ ಬೃಹತ್ ನಗರ 'ಕ್ವಿನ್ ಸಿಟಿ' (Bengaluru KWIN City) ಹಂತ ಹಂತವಾಗಿ ಅಸ್ತಿತ್ವಕ್ಕೆ ಬರಲಿದೆ. ಈ ಯೋಜನೆಗೆ ಸಂಬಂಧಿಸಿದಂತೆ 1200 ಕೋಟಿ ರೂಪಾಯಿ ಯೋಜನೆಯ ಮಹತ್ವದ ಒಪ್ಪಂದ ಏರ್ಪಟ್ಟಿದೆ.
ಹೌದು, ಡಾಬಸಪೇಟೆ-ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ ಮಟ್ಟದ ತನ್ನ 'ಬಿಝ್ಇಂಟೆಲ್ ಹಬ್ ಸ್ಥಾಪಿಸಲು ನಿರ್ಧರಿಸಿದೆ. ಈ ಸಂಬಂಧ ಒಪ್ಪಂದವು ಸೋಮವಾರ ನಡೆಯಿತು.

ನಗರದ ಕಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮತ್ತು ಟೊಯೋಟಾ ಕಂಪನಿಯು ಪರವಾಗಿ ಅದರ ಸಿಓಓ ಮತ್ತು ವಿಶೇಷ ಯೋಜನೆಯ ನಿರ್ದೇಶಕ ಸುದೀಪ್ ದಳವಿ ಅವರು ಈ ಕುರಿತ ಒಪ್ಪಂದಕ್ಕೆ ಅಂಕಿತ ಹಾಕಿದರು.
ಬೆಂಗಳೂರಿನಲ್ಲಿ ವಿಶ್ವದಲ್ಲೇ ಮೊದಲ 'ಬಿಝ್ಇಂಟೆಲ್ ಹಬ್'
ಸಂತಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಹೂಡಿಕೆಗೆ ಸರ್ಕಾರದ ವತಿಯಿಂದ ಸಂಪೂರ್ಣ ಅಗತ್ಯ ಎಲ್ಲ ಸಹಕಾರ ನೀಡಲಾಗುವುದು. ರೀತಿಯ ಘಟಕ ಸ್ಥಾಪನೆ ಆಗುತ್ತಿರುವುದು ವಿಶ್ವದಲ್ಲೇ ಮೊದಲು ಎಂಬುದು ಹೆಮ್ಮೆಯ ಸಂಗತಿ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಕ್ವಿನ್ ಸಿಟಿಯಲ್ಲಿ ಪ್ರಪ್ರಥಮ ಹೂಡಿಕೆ: ಉದ್ಯೋಗ ಸೃಷ್ಟಿ
ಸಚಿವ ಎಂಬಿ ಪಾಟೀಲ್ ಮಾತನಾಡಿ, ಇದು ಕ್ವಿನ್ ಸಿಟಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಹೂಡಿಕೆಯಾಗಿದೆ. ಕಂಪನಿಯು ಐದು ವರ್ಷಗಳಲ್ಲಿ 1,200 ಕೋಟಿ ರೂ.ಗಳನ್ನು ಆರಂಭಿಕ ಬಂಡವಾಳವಾಗಿ ಹೂಡಲಿದ್ದು, ಇದರಿಂದ 200 ಉದ್ಯೋಗ ಸೃಷ್ಟಿಯಾಗಲಿವೆ. ಇದಕ್ಕಾಗಿ ಅಲ್ಲಿ ಟೊಯೋಟಾ ಕಂಪನಿಗೆ 300 ಎಕರೆ ಭೂಮಿ ಒದಗಿಸಲಾಗುವುದು. ಇಲ್ಲಿ ವಾಹನಗಳ ತಯಾರಿಕೆ, ಪರೀಕ್ಷೆಗಳು, ಆಧುನಿಕ ವಾಹನ ತಯಾರಿಕಾ ಸ್ಥಾವರ ಆರಂಭ ಎಲ್ಲವೂ ನಡೆಯಲಿವೆ. ಇದು ರಾಜ್ಯದ ಯುವಜನರಿಗೆ ವರದಾನವಾಗಲಿದೆ ಎಂದು ತಿಳಿಸಿದರು.
ಕ್ವಿನ್ ಸಿಟಿಯಲ್ಲಿ ನಾವೀನ್ಯತೆ, ಆರೋಗ್ಯ ಸೇವೆಗಳು ಮತ್ತು ಐಟಿ ತಂತ್ರಜ್ಞಾನಕ್ಕೆ ಅಗ್ರ ಆದ್ಯತೆ ಕೊಡಲಾಗುವುದು. ಇಲ್ಲಿ ಹೂಡಿಕೆ ಮಾಡಲು ಜಾಗತಿಕ ಮಟ್ಟದ ಏಳೆಂಟು ವಿಶ್ವವಿದ್ಯಾಲಯಗಳು, ಆರೋಗ್ಯ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಈಗಾಗಲೇ ಮುಂದೆ ಬಂದಿವೆ. ಅವುಗಳೊಂದಿಗೂ ಆದಷ್ಟು ತ್ವರಿತವಾಗಿ ಒಡಂಬಡಿಕೆಗೆ ಅಂತಿಮರೂಪ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
48000 ಕೋಟಿ ರೂ ಹೂಡಿಕೆ, 1 ಲಕ್ಷ ಉದ್ಯೋಗ
ಈ ಅತ್ಯಾಧುನಿಕ 'ಜ್ಞಾನ, ಯೋಗಕ್ಷೇಮ ಮತ್ತು ನಾವೀನ್ಯತೆಗಳ ನಗರ'ವು (KWIN City) ಡಾಬಸಪೇಟೆ-ದೊಡ್ಡಬಳ್ಳಾಪುರ ನಡುವಿನ ಒಟ್ಟು 5,800 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಹಂತ ಹಂತವಾಗಿ ನಗರವು ತಲೆ ಎತ್ತಲಿದೆ. ಈಗಾಗಲೇ ಮೊದಲ ಹಂತದ ಅಭಿವೃದ್ಧಿ ಪ್ರಗತಿಯಲ್ಲಿದೆ. ಈ ಯೋಜನೆಗೆ ಒಟ್ಟು 48 ಸಾವಿರ ಕೋಟಿ ರೂಪಾಯಿ ಹೂಡಿಕೆ ಆಗಲಿದೆ. ಒಟ್ಟಾರೆಯಾಗಿ 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವಿವರಿಸಿದರು.
ಡಾಬಸ್ಪೇಟೆ - ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ ಮಟ್ಟದ ತನ್ನ 'ಬಿಝ್ಇಂಟೆಲ್ ಹಬ್ ಸ್ಥಾಪಿಸಲಿದೆ.
— Siddaramaiah (@siddaramaiah) May 25, 2026
ಕಾವೇರಿಯಲ್ಲಿ ಸೋಮವಾರ ನನ್ನ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೃಹತ್… pic.twitter.com/Q7BmozIUe2












Click it and Unblock the Notifications