ವಿರಾಟ್ ಕೊಹ್ಲಿ-ಟ್ರಾವಿಸ್ ಹೆಡ್ ಜಗಳ; ಹೆಡ್ ಪತ್ನಿಗೆ ನಿಂದನೆ
Kohli Vs Head: ಇತ್ತೀಚೆಗಷ್ಟೇ ನಡೆದ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯವು ಐಪಿಎಲ್ 2026ರ ಪ್ಲೇಆಫ್ ಅರ್ಹತೆಯ ದೃಷ್ಟಿಯಿಂದ ಅಷ್ಟೇನೂ ನಿರ್ಣಾಯಕವಾಗಿರಲಿಲ್ಲ. ಆದರೆ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವೆ ನಡೆದ ಘರ್ಷಣೆ ಮಾತ್ರ ದೊಡ್ಡ ಮಟ್ಟದ ಸುದ್ದಿಯಾಯಿತು. ಇದೀಗ ಇದು ಬೇರೆಯದ್ದೇ ತಿರುವು ಪಡೆದುಕೊಂಡಿದ್ದು, ಈ ವಿಚಾರದಲ್ಲಿ ಕೊಹ್ಲಿ ಅಭಿಮಾನಿಗಳು ಹೆಡ್ ಪತ್ನಿಯನ್ನ ಎಳೆತಂದಿದ್ದಾರೆ.
ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಜಯಗಳಿಸಿತು. ಆದರೆ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಅವರು ಟ್ರಾವಿಸ್ ಹೆಡ್ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಂದ್ಯದ ವೇಳೆ ಮೈದಾನದಲ್ಲಿ ಹೆಡ್ ತೋರಿದ ಕೆಲವು ವರ್ತನೆಗಳ ಬಗ್ಗೆ ಕೊಹ್ಲಿ ಅಸಮಾಧಾನಗೊಂಡಿದ್ದರು.

ಆದರೆ ಈ ವಿವಾದ ಇದೀಗ ಬೇರೆಯದೇ ತಿರುವು ಪಡೆದಿದ್ದು, ಕೊಹ್ಲಿ ಅಭಿಮಾನಿಗಳು ಈ ವಿಚಾರದಲ್ಲಿ ಟ್ರಾವಿಸ್ ಹೆಡ್ ಅವರ ಪತ್ನಿ ಜೆಸ್ಸಿಕಾ ಅವರನ್ನು ಎಳೆತಂದಿದ್ದಾರೆ. ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ಅವರ ಕ್ಯಾಚ್ ಅನ್ನು ಟ್ರಾವಿಸ್ ಹೆಡ್ ಹಿಡಿದಾಗಲೂ ಅವರ ಪತ್ನಿ ಜೆಸ್ಸಿಕಾ ಇಂತಹದ್ದೇ ಕಹಿ ಅನುಭವವನ್ನು ಎದುರಿಸಬೇಕಾಗಿ ಬಂದಿತ್ತು.
ಟ್ರಾವಿಸ್ ಹೆಡ್ ಪತ್ನಿ ಜೆಸ್ಸಿಕಾ ಹೇಳಿದ್ದೇನು?
'ಇದೀಗ ಮತ್ತೆ ವಿಶ್ವಕಪ್ ನಂತರ ನಡೆದ ನಿಂದನೆಗಳೇ ಮತ್ತೆ ಮರುಕಳಿಸಿದಂತೆ ಭಾಸವಾಗುತ್ತಿದೆ. ನಾನು ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ನನ್ನ ಸೋಶಿಯಲ್ ಮೀಡಿಯಾ ಖಾತೆಗಳು ನಿಂದನೀಯ ಸಂದೇಶಗಳಿಂದ ತುಂಬಿಹೋಗಿದ್ದವು... ನಾವು ಚೆನ್ನಾಗಿದ್ದೇವೆ. ಆದರೆ ಅವರು ನನ್ನ ಸ್ನೇಹಿತರು ಮತ್ತು ಕುಟುಂಬದವರ ಮೇಲೆ ವೈಯಕ್ತಿಕವಾಗಿ ದಾಳಿ ನಡೆಸುತ್ತಿದ್ದಾರೆ. ಮೈದಾನದ ಘಟನೆಗೆ ಕುಟುಂಬದವರನ್ನು ಎಳೆತರುತ್ತಿರುವುದು ತೀವ್ರ ಮಾನಸಿಕ ಕಿರಿಕಿರಿ ಉಂಟುಮಾಡಿದೆ ಎಂದು ಜೆಸ್ಸಿಕಾ ಅವರು ಅಸಮಾಧಾನ ಹೊರಹಾಕಿದ್ದಾರೆ.
ಐಪಿಎಲ್ ಅಭಿಮಾನಿಗಳಿಗೆ ಜೆಸ್ಸಿಕಾ ಕಿವಿಮಾತು
'ಸದ್ಯದ ಮಟ್ಟಿಗೆ ಎಲ್ಲಾ ಕ್ರೀಡೆಗಳಲ್ಲೂ ಮಾನಸಿಕ ಆರೋಗ್ಯ, ದೃಷ್ಟಿಕೋನ ಮತ್ತು ನಾವು ಪರಸ್ಪರ ಮಾತನಾಡುವ ರೀತಿಯ ಬಗ್ಗೆ ಪ್ರಮುಖ ಚರ್ಚೆ ನಡೆಯುತ್ತಿರುತ್ತವೆ ಎಂದು ನಾನು ಭಾವಿಸುತ್ತೇನೆ. ಕ್ರೀಡೆಯ ಸಮಯದಲ್ಲಿ ಕ್ರೀಡಾಪಡುಗಳ ನಡುವೆ ಸಿಟ್ಟು, ಕೋಪ ಎನ್ನುವುದು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಆದರೆ ಆ ಆಟದ ಹಿಂದೆ ಕುಟುಂಬಗಳು ಇವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಇನ್ನು ಮುಂದಾದರೂ ಪರಸ್ಪರ ಗೌರವ, ಪ್ರೀತಿ ಮತ್ತು ಬೆಂಬಲ ನೀಡಲು ಪ್ರೇರಣೆಯಾಗಲಿ ಎಂದು ನಾನು ಆಶಿಸುತ್ತೇನೆ,' ಅಂತಾ ಐಪಿಎಲ್ ಅಭಿಮಾನಿಗಳಿಗೆ ಹೇಳಿದ್ದಾರೆ.
ಇರ್ಫಾನ್ ಪಠಾಣ್ ಹೇಳಿದ್ದೇನು?
ಎಸ್‌ಆರ್‌ಹೆಚ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಭಾರತದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಅವರು, ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಇಬ್ಬರ ನಡುವೆ ನಡೆದ ಸಂಘರ್ಷದ ಬಗ್ಗೆ ಕೆಲವು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಮೈದಾನದಲ್ಲಿ ನಡೆದ ಈ ಜಗಳವೇ ಪಂದ್ಯದ ನಂತರ ಹಸ್ತಲಾಘವ ನಿರಾಕರಿಸಲು ಕಾರಣವಾಯಿತು. ಇದನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.
ಆ ಸಮಯದಲ್ಲಿ ನಾನು ಕಾಮೆಂಟರಿ ಮಾಡುತ್ತಿದ್ದೆ. ನೋಡಿ ಆಸ್ಟ್ರೇಲಿಯನ್ನರು ಆಡುವುದನ್ನು ವಿರಾಟ್ ಕೂಡ ಇಷ್ಟಪಡುತ್ತಾರೆ. ಆದರೆ ಈ ಪಂದ್ಯದ ವೇಳೆ ಕೆಲವು ಸವಾಲುಗಳ ಸಮರ ನಡೆದವು. ವಿರಾಟ್ ಅವರು ಹೆಡ್‌ಗೆ ನೀನು ಇಂಪ್ಯಾಕ್ಟ್ ಪ್ಲೇಯರ್ ಅಲ್ಲ ಎಂದು ಹೇಳುತ್ತಿದ್ದರು. ಸಾಮಾನ್ಯವಾಗಿ ಹೆಡ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದು ಮೈದಾನದಿಂದ ಹೊರಹೋಗುತ್ತಾರೆ. ಪಂದ್ಯದ ನಂತರ ಏನಾಯಿತು ಎಂಬುದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಮೈದಾನದಲ್ಲಿ ಇಂತಹ ಸಣ್ಣಪುಟ್ಟ ಮಾತಿನ ಚಕಮಕಿಗಳು ನಡೆಯುತ್ತವೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ವಿಶೇಷ ಅಂದ್ರೆ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ಎರಡೂ ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆದಿವೆ. ಹೀಗಾಗಿ ಈ ಆವೃತ್ತಿಯಲ್ಲಿ ಈ ಎರಡು ತಂಡಗಳು ಮತ್ತೆ ಮುಖಾಮುಖಿಯಾಗುವ ಸಾಧ್ಯತೆಯಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.












Click it and Unblock the Notifications