ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ, ಭಾವುಕರಾಗಿ ಪ್ರಶಸ್ತಿ ಸ್ವೀಕರಿಸಿದ ಪತ್ನಿ ಹೇಮಾ ಮಾಲಿನಿ, ಪುರಸ್ಕೃತರ ಪಟ್ಟಿ ಇಲ್ಲಿದೆ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ (ಮೇ 25) ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 2026ನೇ ಸಾಲಿನ ಪ್ರತಿಷ್ಠಿತ 'ಪದ್ಮ' ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಭವ್ಯ ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನಟ ಧರ್ಮೇಂದ್ರ ಅವರಿಗೆ ಮರಣೋತ್ತರ 'ಪದ್ಮವಿಭೂಷಣ'
ಕಳೆದ 2025ರ ನವೆಂಬರ್‌ನಲ್ಲಿ ನಿಧನರಾದ ಬಾಲಿವುಡ್‌ನ ದಂತಕಥೆ, ನಟ ಧರ್ಮೇಂದ್ರ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮವಿಭೂಷಣ'ವನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಯಿತು. ಅವರ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಪತ್ನಿ, ನಟಿ ಹಾಗೂ ರಾಜಕಾರಣಿ ಹೇಮಾ ಮಾಲಿನಿ ಅವರು ತೀವ್ರ ಭಾವುಕರಾದರು. ಇದಕ್ಕೂ ಮುನ್ನ, ಧರ್ಮೇಂದ್ರ ಅವರಿಗೆ 2012ರಲ್ಲಿ 'ಪದ್ಮಭೂಷಣ' ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಪ್ರಸಿದ್ಧ ಪಿಟೀಲು ವಾದಕಿ ಎನ್.ರಾಜಂ ಅವರಿಗೂ ಪದ್ಮವಿಭೂಷಣ ಗೌರವ ಸಮರ್ಪಿಸಲಾಯಿತು. ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮತ್ತು ಪ್ರಮುಖ ಬ್ಯಾಂಕರ್ ಉದಯ್ ಕೋಟಕ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭಾರತೀಯ ಚಿತ್ರರಂಗಕ್ಕೆ, ವಿಶೇಷವಾಗಿ ಬೆಂಗಾಲಿ ಸಿನಿಮಾಗಳಿಗೆ ನೀಡಿದ ಅಪಾರ ಕೊಡುಗೆಗಾಗಿ ಖ್ಯಾತ ನಟ ಪ್ರೊಸೆಂಜಿತ್ ಚಟರ್ಜಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು. ಈ ವಿಶೇಷ ಸಂದರ್ಭಕ್ಕಾಗಿ ಪ್ರೊಸೆಂಜಿತ್ ಚಟರ್ಜಿ ಅವರು ಸಾಂಪ್ರದಾಯಿಕ ಶೈಲಿಯ ಚಿನ್ನದ ಬಣ್ಣದ ಕುರ್ತಾ ಧರಿಸಿ ಗಮನ ಸೆಳೆದರು.
ಕಲೆ ಮತ್ತು ಚಿತ್ರರಂಗದ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಮಲಯಾಳಂ ಚಿತ್ರರಂಗದ ದಂತಕಥೆ ಮಮ್ಮುಟ್ಟಿ ಹಾಗೂ ಹಿರಿಯ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಸೇರಿದಂತೆ ಹಲವು ಗಣ್ಯರಿಗೆ ಪ್ರತಿಷ್ಠಿತ 'ಪದ್ಮ' ಪ್ರಶಸ್ತಿ ಸಿಕ್ಕಿದೆ. ಖ್ಯಾತ ನಟ ಮಮ್ಮುಟ್ಟಿ, ಗಾಯಕಿ ಅಲ್ಕಾ ಯಾಗ್ನಿಕ್ ಮತ್ತು ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಷ್ ಪಾಂಡೆ (ಮರಣೋತ್ತರ) ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮಭೂಷಣ' ಒಲಿದಿದೆ. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಮಮ್ಮುಟ್ಟಿ ಹಾಗೂ ಅಲ್ಕಾ ಯಾಗ್ನಿಕ್ ಅವರು ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರುಹಾಜರಾಗಿದ್ದರು. ಮರಣೋತ್ತರ ಪ್ರಶಸ್ತಿ ಪಡೆದ ಪಿಯೂಷ್ ಪಾಂಡೆ ಅವರ ಪರವಾಗಿ ಅವರ ಪತ್ನಿ ನೀತಾ ಪಾಂಡೆ ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
#WATCH | Delhi | Padma Vibhushan awarded to legendary veteran actor late Dharmendra by President Droupadi Murmu
— ANI (@ANI) May 25, 2026
BJP MP Hema Malini received the honour awarded to her late husband and legendary actor for his contribution in the field of Arts
(Video source: President of… pic.twitter.com/HglPJJAXRl
ಚಿತ್ರರಂಗದ ಗಣ್ಯರಿಗೆ 'ಪದ್ಮಶ್ರೀ' ಪುರಸ್ಕಾರ
ಕಲಾ ವಿಭಾಗದಲ್ಲಿ ಭಾರತೀಯ ಚಿತ್ರರಂಗದ ಪ್ರಮುಖ ನಟರುಗಳಾದ ಆರ್. ಮಾಧವನ್, ಪ್ರೊಸೆಂಜಿತ್ ಚಟರ್ಜಿ, ಸತೀಶ್ ಶಾ, ಮುರಳಿ ಮೋಹನ್ ಮತ್ತು ರಾಜೇಂದ್ರ ಪ್ರಸಾದ್ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಮಾರಂಭದಲ್ಲಿ ನಟ ಪ್ರೊಸೆಂಜಿತ್ ಚಟರ್ಜಿ ಅವರು ಖುದ್ದಾಗಿ ಉಪಸ್ಥಿತರಿದ್ದು ಪ್ರಶಸ್ತಿ ಸ್ವೀಕರಿಸಿದರೆ, ನಟರುಗಳಾದ ಆರ್. ಮಾಧವನ್, ಮುರಳಿ ಮೋಹನ್ ಮತ್ತು ರಾಜೇಂದ್ರ ಪ್ರಸಾದ್ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.
ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮ' ಪ್ರಶಸ್ತಿಗಳು ದೇಶದ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಹಾಗೂ ಅತ್ಯುನ್ನತ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ಪುರಸ್ಕಾರಗಳಾಗಿವೆ. ಕಲೆ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ ಹಾಗೂ ಸಿವಿಲ್ ಸೇವೆ ಸೇರಿದಂತೆ ವಿವಿಧ ರಂಗಗಳಲ್ಲಿ ಗಣನೀಯ ಕೊಡುಗೆ ನೀಡಿದ ನಾಗರಿಕರಿಗೆ ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.













Click it and Unblock the Notifications