ಹಿರಿಯೂರಿನ ಗೌನಹಳ್ಳಿಯಲ್ಲಿ ಮಳೆಗೆ ಧರೆಗುರುಳಿದ ಬಾಳೆ, ತೆಂಗು, ಅಡಿಕೆ ಮರಗಳು
ಚಿತ್ರದುರ್ಗ, ಸೆಪ್ಟೆಂಬರ್. 05: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಮಳೆರಾಯನ ಆರ್ಭಟಕ್ಕೆ ಬಾಳೆ, ಅಡಿಕೆ, ತೆಂಗಿನ ಮರಗಳು ಧರೆಗುರುಳಿವೆ. ಗೌನಹಳ್ಳಿಯಲ್ಲಿ ಒಂದೇ ಗ್ರಾಮದಲ್ಲಿ ಸುಮಾರು 50ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
ಗೌನಹಳ್ಳಿಯಲ್ಲಿ ಅಪಾರ ಪ್ರಮಾಣದ ಹಾನಿ
ತಾಲೂಕಿನ ಗೌನಹಳ್ಳಿಯಲ್ಲಿ ಭಾರಿ ಮಳೆ ಸುರಿದಿದ್ದು, ಫಸಲಿಗೆ ಬಂದಿದ್ದ ಅಡಿಕೆ ಗಿಡಗಳು, ತೆಂಗಿನ ಗಿಡಗಳು ಹಾಗೂ ಬಾಳೆ ಬೆಳೆಗಳು ಜಲಾವೃತ ಆಗಿವೆ. ಗ್ರಾಮದ ಪ್ರಶಾಂತ್ ಅವರ 100 ಅಡಿಕೆ ಮರಗಳು, 10 ತೆಂಗಿನ ಮರಗಳು ಧರೆಗುರುಳಿವೆ. ಕೆ.ಚಿಕ್ಕಣ್ಣ ಅವರಿಗೆ ಸೇರಿದ ಜಮೀನಿನಲ್ಲಿ 50 ಅಡಿಕೆ ಮರ, 3 ತೆಂಗಿನ ಮರಗಳು ಧರೆಗುರುಳಿವೆ. ಇನ್ನು ಯು.ತಿಪ್ಪೇಸ್ವಾಮಿ ಅವರಿಗೆ ಸೇರಿದ ಜಮೀನಿನಲ್ಲಿ 70 ಅಡಿಕೆ ಗಿಡಗಳು, ರಂಗಪ್ಪ ಅವರ 30 ಅಡಿಕೆ ಮರಗಳು, ದಯಾನಂದ್ ಅವರ 10 ತೆಂಗಿನ ಗಿಡಗಳು, 100 ಅಡಿಕೆ ಮರಗಳು ಜಲಾವೃತವಾಗಿವೆ. ಓಂಕಾರಪ್ಪ ಅವರಿಗೆ ಸೇರಿದ ಜಮೀನಿನಲ್ಲಿ 300 ಬಾಳೆ ಗಿಡ, 20 ಅಡಿಕೆ ಗಿಡಗಳು ಜಲಾವೃತವಾಗಿವೆ.
ಇನ್ನು ಕೆ.ನಾಗರಾಜ ಅವರ ಜಮೀನಿನಲ್ಲಿ 70 ಅಡಿಕೆ ಗಿಡಗಳು, ನಾಲ್ಕು ತೆಂಗಿನ ಗಿಡಗಳು, ಬಿ.ನಾಗರಾಜ್ ಅವರ 40 ಅಡಿಕೆ ಗಿಡಗಳು, ಗೌನಹಳ್ಳಿಯ ಜಿ.ಯು.ತಿಪ್ಪಣ್ಣ ಎಂಬುವರ ತೋಟದಲ್ಲಿ 150 ಅಡಿಕೆ ಮರಗಳು, ವೈ.ನಿಂಗಣ್ಣ ಅವರ 150, ಜಿ.ಯು.ಕರಿಯಪ್ಪ ಅವರ 70, ಅಮೋಘ ಅವರ 10, ಚಂದ್ರಪ್ಪನವರ 25, ಬೇಲೂರಪ್ಪ ಎಂಬುವವರ 50 ಅಡಿಕೆ ಮರಗಳು ಜಲಾವೃತ ಆಗಿವೆ.

ಧರೆಗುರುಳಿದ ಅಡಿಕೆ, ತೆಂಗು, ಬಾಳೆ ಗಿಡಗಳು
ಎನ್. ನಿಂಗಪ್ಪನವರ ತೋಟದಲ್ಲಿ 50 ಅಡಿಕೆ ಗಿಡಗಳು, ದಯಾನಂದ್ ಅವರ ತೋಟದಲ್ಲಿ 35 ಗಿಡಗಳು, ಓಂಕಾರಪ್ಪ ಅವರ 30 ಅಡಿಕೆ ಗಿಡಗಳು, ರಂಗಪ್ಪ ಎಂಬುವವರ 35 ಅಡಿಕೆ ಗಿಡಗಳು, ಬಿ. ನಾಗರಾಜ್‌ಗೆ ಸೇರಿದ 35, ದೇವಣ್ಣ ಅವರ 25, ಎಸ್. ರಂಗಪ್ಪನವರ 35, ಗೌಡರ ಶಂಕರಣ್ಣನವರ 25 ಅಡಿಕೆ ಮರಗಳು, ಸಿದ್ರಾಮಣ್ಣನವರ 10 ಹಾಗೂ ಪುರದಪ್ಪರ ತಿಪ್ಪೇಸ್ವಾಮಿ ಅವರ 10 ಅಡಿಕೆ ಮರಗಳು ಮುರಿದು ಬಿದ್ದಿವೆ. ಕರಿಯಪ್ಪ ಎಂಬುವವರ ಎರಡು ಅಡಿಕೆ ಮರಗಳು, ವೈ. ನಿಂಗಣ್ಣ ಅವರ 6 ಅಡಿಕೆ ಮರಗಳು, ದಯಾನಂದಮೂರ್ತಿ ಅವರ 5 ತೆಂಗಿನ ಮರಗಳು, ಎಸ್. ರಂಗಪ್ಪ ಅವರ 150 ಅಡಿಕೆ ಮರಗಳು, ಸಿದ್ರಾಮಣ್ಣ ಅವರ 50 ಬಾಳೆ ಗಿಡಗಳು ಸೇರಿದಂತೆ ಇನ್ನು ಅನೇಕ ರೈತರ ಬಾಳೆ, ಅಡಿಕೆ, ತೆಂಗು ಬೆಳೆಗಳು ನೆಲಕ್ಕುರುಳಿವೆ.
ಧರೆಗುರುಳಿದ ವಿದ್ಯುತ್ ಕಂಬಗಳು
ಗೌನಹಳ್ಳಿ-ಬೂತಯ್ಯನಹಟ್ಟಿ ರಸ್ತೆಯಲ್ಲಿ 5 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಗುಡಿಹಳ್ಳಿ ರಸ್ತೆಯಲ್ಲಿ ಒಂದು ವಿದ್ಯುತ್ ಕಂಬ ಉರುಳಿ ಬಿದ್ದಿವೆ. ಗೌನಹಳ್ಳಿ ಕೆರೆ ಮುಂಭಾಗ ಇರುವ ಶಾಂತಯ್ಯ ಅವರ ತೋಟದಲ್ಲಿ ಪರಿವರ್ತಕ ಸಮೇತ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಫಸಲಿಗೆ ಬಂದಿದ್ದ ಸಾವಿರಾರು ಅಡಿಕೆ, ತೆಂಗು, ಬಾಳೆ ಗಿಡಗಳು ಮುರಿದು ಬಿದ್ದಿದ್ದು, ದಿಕ್ಕು ತೋಚದಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಪರಿಹಾರ ಕೊಡಿಸುವುದಾಗಿ ಶಾಸಕಿ ಭರವಸೆ
ವಿಷಯ ತಿಳಿದ ತಕ್ಷಣ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹಾಗೂ ತಹಶೀಲ್ದಾರ್ ಪ್ರಶಾಂತ್ ಕೆ.ಪಾಟೀಲ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಣ್ಣ, ರಾಜಣ್ಣ, ಲೋಕೇಶ್, ಚಿಕ್ಕಣ್ಣ, ಪ್ರಸನ್ನ, ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications