ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾವನಾ ಭಾವನೆಗಳಿಗೆ ಕೋಟೆ ಮತದಾರರು ಸ್ಪಂದಿಸುತ್ತಾರಾ?

By Srinath
|
Google Oneindia Kannada News

ಚಿತ್ರದುರ್ಗ, ಏ. 8: ಬೆಂಗಳೂರು ಮತ್ತು ಚಿತ್ರದುರ್ಗ ಹೈವೆ ರಸ್ತೆಯಲ್ಲಿ ಹೊಳಲ್ಕೆರೆ ರಸ್ತೆಗೆ ಅಂಟಿಕೊಂಡಂತೆ ಒಂದು ಚಿಕ್ಕ ಢಾಬಾ ಇದೆ. ಅದರ ಒಡತಿ ಟಿ ಭಾವನಾ. ಸಮಾಜದಿಂದ ತಿರಸ್ಕೃತಗೊಂಡು ನೋವು ಅನುಭವಿಸುತ್ತಿದ್ದ ಭಾವನಾ ಕಾಲಾಂತರದಲ್ಲಿ 'ಸತಾರಾ' ಎಂಬ ಪುಟ್ಟ ಢಾಬಾ ಪ್ರಾರಂಭಿಸಿ, ತನ್ಮೂಲಕ ಸ್ವತಂತ್ರ ಬದುಕು ಕಟ್ಟಿಕೊಂಡು ಯಶಸ್ಸು ಸಹ ಕಂಡುಕೊಂಡಳು.

34 ವರ್ಷದ ಭಾವನಾಳ ಜೀವನ ಇದೀಗ ಮತ್ತೊಂದು ಮಜಲು ತಲುಪಿದೆ. ಹಾಲಿ ಲೋಕಸಭಾ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾಳೆ. ಈಕೆಯ ಬಗ್ಗೆ ಮುಂದೆ ಸಾಕಷ್ಟು ಹೇಳುವುದಿದೆ. ಅದಕ್ಕೂ ಮುನ್ನ ಭಾವನಾ ಮಂಗಳಮುಖಿ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಬೇಕಿದೆ. (ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಿರುಪರಿಚಯ)

ಇಂತಿಪ್ಪ ನಮ್ಮ ಕಥಾನಾಯಕಿ ಈಗ ಚುನಾವಣಾ ಬ್ಯುಸಿಯಲ್ಲಿದ್ದಾರೆ. ತನ್ನ ಢಾಬಾದಲ್ಲಿ ಅಗತ್ಯವಾಗಿ ಬಳಸುವ ಗ್ಯಾಸ್ ಸಿಲಿಂಡರ್ ಅನ್ನೇ ತನ್ನ ಚುನಾವಣಾ ಚಿಹ್ನೆಯನ್ನಾಗಿ ಪಡೆದಿರುವ ಮಂಗಳಮುಖಿ ಭಾವನಾ ಸಮಾಜಮುಖಿಯಾಗಿ ಹೊರಟರೆಂದರೆ ಸಮಾಜ ಆಕೆಯನ್ನು ವಿಶೇಷವಾಗಿ ಆದರದಿಂದ ಬರ ಮಾಡಿಕೊಳ್ಳುತ್ತಿದೆ.

ls-polls-meet-transgender-bhavana-independent-candidate-chitradurga
ಆಟೋ ರಿಕ್ಷಾದ ಮೇಲೆ ತನ್ನ ಚುನಾವಣಾ ಚಿಹ್ನೆಯಾದ ಗ್ಯಾಸ್ ಸಿಲಿಂಡರ್ ಅನ್ನು ಕಟ್ಟಿಕೊಂಡು ಭವಿಷ್ಯದಲ್ಲಿ ಚಿತ್ರದುರ್ಗ ಜನತೆಗಾಗಿ ಕನಸುಗಳ ಮೂಟೆಯನ್ನು ಹೊತ್ತು ಕ್ಷೇತ್ರದಾದ್ಯಂತ ಭಾವನಾ ಮತ ಯಾಚಿಸುತ್ತಿದ್ದಾರೆ.

ಉದ್ದ ತೋಳಿನ ರವಿಕೆ ಮತ್ತು ಬಿಳಿ ಹೂಗಳ ಸೀರೆಯುಟ್ಟ ಭಾವನಾ, ಮುಖದ ತುಂಬ ನಗೆ ತುಂಬಿಕೊಂಡು ಸಾಗುತ್ತಿದ್ದರೆ ಜನ ಆಕೆಯನ್ನು ನೋಡಲು ಗುಂಪು ಗುಂಪಾಗಿ ಸೇರುತ್ತಾರೆ. ಕೆಲವರು ದೂರದಿಂದಲೇ ಕುತೂಹಲದಿಂದ ಕಣ್ಬಿಟ್ಟರೆ ಅನೇಕ ಮಂದಿ ಅಭಿಮಾನದಿಂದ ಆಕೆಯನ್ನು ಹಿಂಬಾಲಿಸುತ್ತಾರೆ.

ಅಂದಹಾಗೆ ಚುನಾವಣೆ ಖರ್ಚಿಗೆಂದು ಭಾನವಾ ಬಳಿಯಿರುವುದು ಕೇಲವ 3 ಲಕ್ಷ ರೂಪಾಯಿ. ನನ್ನ ಢಾಬಾದಿಂದ ದಿನಕ್ಕೆ ಒಂದೆರಡು ಸಾವಿರ ರೂ ಸಂಪಾದಿಸುತ್ತೇನೆ. ಸ್ವಲ್ಪ ಜಮೀನು ಇದೆ. ನಾನು ನಾಂಪತ್ರ ಸಲ್ಲಿಸಿದ ಬಳಿಕ ಪ್ರಮುಖ ರಾಜಕೀಯ ಪಕ್ಷಗಳ ನೇತಾರರು ನನಗೆ ಹಣ ನೀಡಲು ಬಂದರು. ಜತೆಗೆ ಜಮೀನು ಸಹ ಕೊಡುವುದಾಗಿ ಹೇಳಿದರು. ಆದರೆ ಅವರದ್ದು ಒಂದೇ ಬೇಡಿಕೆಯಿತ್ತು. ಸ್ಪರ್ಧೆಯಿಂದ ಹಿಂದೆಸರಿಯುವಂತೆ ಅವರು ಮನವಿ ಮಾಡಿದ್ದರು. ಅದನ್ನು ನಾನು ಒಪ್ಪಲಿಲ್ಲ. ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲವೆಂದು ಹೇಳಿಬಿಟ್ಟೆ. ಹಾಗಾಗಿ ಕಣದಲ್ಲಿ ಗಟ್ಟಿಯಾಗಿ ಉಳಿದುಬಿಟ್ಟೆ ಎನ್ನುತ್ತಾರೆ ಭಾವನಾ.

ಇದುವರೆಗೂ ನನ್ನನ್ನು, ನಮ್ಮ ಸ್ಥಿತಿಗತಿಯನ್ನು ಗಮನಿಸದ ರಾಜಕಾರಣಿಗಳಿಗೆ ನಮ್ಮ ಮಹತ್ವವೇನೆಂಬುದು ಈಗ ಅರಿಯುವಂತಾಗಿದೆ' ಎಂದು ವಿಷಾದ ಬೆರೆತ ವಿಶ್ವಾಸದಲ್ಲಿ ಭಾವನಾ ಪ್ರತಿಕ್ರಿಯಿಸುತ್ತಾರೆ. (ಶಾಪ ವಿಮೋಚನೆಗೆ ಕಾದಿರುವ ದುರ್ಗದ ಬಂಡೆಗಳು)

15 ವರ್ಷದವಳಿದ್ದಾಗ ನಾನು ಮಂಗಳಮುಖಿಯಾಗುತ್ತಿದ್ದೇನೆ ಎಂಬುದು ನನ್ನ ಅನುಭವಕ್ಕೆ ಬರತೊಡಗಿತು. ಮನೆಯವರಿಗೆ ಅದೆಲ್ಲಾ ವಿಚಿತ್ರವೆನಿಸತೊಡಗಿತು. ಆಗ ನಾನು ಮನೆಬಿಟ್ಟು ಹೊರಜಗತ್ತಿಗೆ ತೆರೆದುಕೊಂಡೆ ಎಂದು ಭಾವನಾ ತನ್ನ ಆರಂಭದ ದಿನಗಳನ್ನು ಬಿಚ್ಚಿಟ್ಟರು.

ಅದಾದ ನಂತರ ಜೀವನ ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಿತು. ಬೆವರು ಹರಿಸಿ ದುಡಿದ ಹಣದಿಂದ ಢಾಬಾ ತೆರೆದೆ. ಅದು ಯಶಸ್ವಿಯಾಯಿತು. ನನ್ನೊಂದಿಗೆ ಇನ್ನೂ ಮೂವರು ಮಂಗಳಮುಖಿಯರು ಇದ್ದಾರೆ. ತಿಲಕಾ, ಲತಿಕಾ ಮತ್ತು ಚಂದ್ರಕಲಾ ಅಂತ. ನಮಗೆಲ್ಲಾ ಸುನಿಲ್ ಖಾಂಡ್ರಾ ಬೆನ್ನೆಲುಬಾಗಿ ನಿಂತಿದ್ದಾನೆ. ಅಂದಹಾಗೆ ಈ 14 ವರ್ಷಗಳಲ್ಲಿ ಭಾವನಾಳ ಮನೆಯವರು ಯಾರೂ ಇತ್ತ ತಲೆ ಹಾಕಿಲ್ಲ.

ಲೈಂಗಿಕ ಅಲ್ಪಸಂಖ್ಯಾತರು ಮತ್ತು ಶೋಷಿತರು ನನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತಾರೆ. ಅವರಿಗೆಲ್ಲ ಒಂದು ಭದ್ರ ನೆಲೆ ಕಲ್ಪಿಸಿಕೊಡಬೇಕು ಎಂಬುದೇ ನನ್ನ ಧ್ಯೇಯ. ಇನ್ನಿತರೆ ಜನರೂ ನನ್ನಿಂದ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದಾರೆ. ಪ್ರಮುಖ ರಾಜಕೀಯ ನೇತಾರರು ಏನೂ ಮಾಡುತ್ತಿಲ್ಲ. ನೀನಾದರೂ ಜನತೆಗೆ ಒಳ್ಳೆಯದನ್ನು ಮಾಡು. ನಿನಗೆ ಬೆಂಬಲವಾಘಿ ನಾವಿದ್ದೇವೆ ಎಂದು ಜನ ಮಾತನಾಡುತ್ತಿದ್ದಾರೆ.

ನಾನು ಅವರ ನಿರೀಕ್ಷೆಗಳಿಗೆ ಸ್ಪಂದಿಸಬೇಕಿದೆ. ಸೋತರೂ ಪರವಾಗಿಲ್ಲ. ಮುಂದಿನ ಸ್ಥಳೀಯ ಚುನಾವಣೆಗಳು ಮತ್ತು ವಿಧಾನಸಭಾ ಚುನಾವಣೆಗೆ ನಿಲ್ಲುವೆ. ನಾನೇ ಅಂತ ಅಲ್ಲ, ನಮ್ಮ ಮಂಗಳಮುಖಿಯರ ಪೈಕಿ ಯಾರೇ ಚುನಾವಣೆಗೆ ನಿಂತರೂ ನಾನು ಬೆಂಬಲಿಸುವೆ. ಕಳೆದ ವಿಧಾನಸಭಾ ಚುನಾವಣೆಯಲ್ಲೇ ಕಣಕ್ಕಿಳಿಯುವ ಮನಸ್ಸಾಗಿತ್ತು. ಆದರೆ ನಮಗೆ ಮತದಾರರ ಗುರುತಿನ ಚೀಟಿ ಪ್ರಾಪ್ತಿಯಾಗಿದ್ದೆ ಇತ್ತೀಚೆಗೆ ಎಂದು ಅಮಾಯಕ ನೋಟ ಬೀರಿದ ಭಾವನಾಗೆ ಚುನಾವಣೆಯಲ್ಲಿ ಒಳ್ಳೆಯದಾಗಲಿ ಎಂದು ಹಾರೈಸುವ ಮನಸಾಯಿತು.

English summary
Lok Sabha Polls 2014- Meet transgender Bhavana an independent candidate from Chitradurga. T Bhavana, 34 year old transgender who owns Satara dhaba on Bangalore-Chitradurga highway, is contesting as an Independent from Chitradurga. Almost 10 km from the dhaba, on Holalkere Road, Bhavana's campaign is on full steam. An autorickshaw with a cooking gas cylinder (her symbol) tied atop, precedes the modified luggage carrier she stands on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X