ಹಿರಿಯೂರು: ಶೆಡ್‌ಗೆ ಆಕಸ್ಮಿಕ ಬೆಂಕಿ ತಗುಲಿ 35ಕ್ಕೂ ಹೆಚ್ಚು ಕುರಿಗಳು ಸಾವು
ಹಿರಿಯೂರು, ಮಾರ್ಚ್, 31: ತಾಲೂಕಿನ ಜವನಗೊಂಡನಹಳ್ಳಿ ಹೋಬಳಿ ಓಣಿಹಟ್ಟಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅನಾಹುತದಿಂದ 35ಕ್ಕೂ ಹೆಚ್ಚು ಕುರಿಗಳು ಮೃತಪಟ್ಟ ಹಾಗೂ ಎರಡು ಕುರಿ ಶೆಡ್‌ಗಳು ಸುಟ್ಟು ಕರಕಲಾಗಿರುವ ಘಟನೆ ಶನಿವಾರ (ಮಾರ್ಚ್ 30) ಸಂಜೆ ನಡೆದಿದೆ.
ತಾಲೂಕಿನ ಓಣಿಹಟ್ಟಿ ಗ್ರಾಮದ ಚಿತ್ತಪ್ಪ, ಶಿವಣ್ಣ, ಚಿತ್ತಯ್ಯ ಅವರಿಗೆ ಸೇರಿದ ಕುರಿಗಳು ಹಾಗೂ ಎರಡು ಕುರಿ ಶೆಡ್‌ಗಳು ಸುಟ್ಟು ಕರಕಲಾಗಿವೆ. ಶನಿವಾರ ಸಂಜೆ ಸುಮಾರು 4 ಗಂಟೆ ವೇಳೆಗೆ 30*40*40 ಅಳತೆಯ ಎರಡು ಕುರಿ ಶೆಡ್‌ಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ವ್ಯಾಪಕವಾಗಿ ಹರಡಿದೆ.

ಇನ್ನು ಶೆಡ್‌ನಲ್ಲಿದ್ದ 15 ಕುರಿಗಳು, 01 ಮೇಕೆ ಹಾಗೂ 20 ಕುರಿಮರಿಗಳು ಸುಟ್ಟು ಕರಕಲಾಗಿದ್ದು, ಶೆಡ್‌ನ ಮೇಲ್ಛಾವಣಿ ಮತ್ತು ಶೆಡ್ ಹಾಗೂ 10 ತೆಂಗಿನ ಮರಗಳು ಬೆಂಕಿಯಲ್ಲಿ ಸುಟ್ಟಿವೆ. ವಿಷಯ ತಿಳಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
ಈ ಬಗ್ಗೆ ತಹಶೀಲ್ದಾರ್ ಸಿ.ರಾಜೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತೆಂಗಿನ ಮರಕ್ಕೆ ಬೆಂಕಿ ತಗುಲಿ ಬೆಂಕಿ ಹತ್ತಿಕೊಂಡು ಕುರಿಗಳು ಹಾಗೂ ಕುರಿಶೆಡ್‌ಗಳು ಸುಟ್ಟಿವೆ. ವಿಷಯ ತಿಳಿದ ತಕ್ಷಣವೇ ಪಶುವೈದ್ಯ ಡಾ.ಹುಸೇನ್, ಡೆಪ್ಯೂಟಿ ತಹಶೀಲ್ದಾರ್ ಜಗನ್ನಾಥ್, ವಿಎ ಮಂಜುನಾಥ್ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಸರ್ಕಾರದಿಂದ ಅವರಿಗೆ ಸೂಕ್ತ ಪರಿಹಾರ ಕೊಡಿಸಲಾಗುತ್ತದೆ ಎಂದರು.
ಸುಟ್ಟು ಕರಕಲಾದ ಮರಗಳು: ಜಮೀನಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಉಂಟಾಗಿ ತೆಂಗಿನಕಾಯಿ, ತೇಗದ ಮರಗಳು, ತೆಂಗಿನಮರಗಳು ಸುಟ್ಟು ಕರಕಲಾದ ಘಟನೆ ಚಾಮರಾಜನಗರದ ತಾಲೂಕಿನ ಆಲೂರುಹೊಮ್ಮ ಗ್ರಾಮದಲ್ಲಿ ಮಾರ್ಚ್ 02ರಂದು ಮಧ್ಯಾಹ್ನ 2ಕ್ಕೆ ನಡೆದಿದೆ.
ಚಾಮರಾಜನಗರ ತಾಲೂಕಿನ ಆಲೂರು ಹೊಮ್ಮ ಗ್ರಾಮದಲ್ಲಿ ಎಚ್ಎಸ್ ಮಲ್ಲಣ್ಣ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿದ್ದ ತೆಂಗಿನಕಾಯಿ ರಾಶಿಗೆ ಬೆಂಕಿ ಬಿದ್ದು, ಬಳಿಕ ಜಮೀನಿನಲ್ಲಿದ್ದ ತೇಗದ ಮರಗಳು ತೆಂಗಿನ ಮರಗಳಿಗೂ ಬೆಂಕಿ ತಗುಲಿದೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಇನ್ನು ತೆಂಗಿನ ಮರಗಳ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.












Click it and Unblock the Notifications